ನವದೆಹಲಿ : ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ದೂರುದಾರ ಸಂತ್ರಸ್ತರು ಮತ್ತು ಸಾಕ್ಷಿಗಳ ಮೇಲೆ ಆರೋಪಿಗಳು ಅಥವಾ ಸಂಸ್ಥೆಗಳು ಪ್ರತೀಕಾರ ತೀರಿಸಿಕೊಳ್ಳುವ ಅಥವಾ ಬಲಿಪಶು ಮಾಡುವುದರಿಂದ ರಕ್ಷಿಸಲು ನಿರ್ದೇಶನಗಳನ್ನು ನೀಡಲು ಕೋರಿ ಸಲ್ಲಿಸಲಾದ ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು, ಇಂತಹದ್ದೇ ಅರ್ಜಿಗೆ ಸಂಬಂಧಿಸಿ ಮಧ್ಯಪ್ರವೇಶಿಸಲು ನ್ಯಾಯಾಲಯವು 2020ರಲ್ಲಿ ನಿರಕಾರಿಸಿರುವುದನ್ನು ಉಲ್ಲೇಖಿಸಿದೆ. ಅಲ್ಲದೆ, ತಮ್ಮ ಪ್ರಕರಣಕ್ಕೆ ಪೂರಕವಾಗಿ ನಿರ್ದಿಷ್ಟವಾದ ಉದಾಹರಣೆಗಳನ್ನು ನೀಡುವಂತೆ ಅರ್ಜಿದಾರಿಗೆ ಸೂಚಿಸಿದೆ.
'ಇದೇ ರೀತಿ ಕೋರಿಕೆಯ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದಾಗ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿ 2020ರ ಜನವರಿ 6ರಂದು ಆದೇಶ ನೀಡಿದೆ. ದೂರುದಾರರು ಸಂಬಂಧಿಸಿದ ಇಲಾಖೆ, ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೂರುಗಳನ್ನು ಪರಿಶೀಲಿಸಿದ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅವರ ವಿವೇಚನೆಗೆ ಬಿಡಲಾಗಿದೆ' ಎಂದು ಪೀಠವು ಹೇಳಿದೆ.
ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಸಾಕ್ಷಿಗಳು ಮತ್ತು ದೂರುದಾರರ ರಕ್ಷಣೆಗೆ ನಿರ್ದೇಶನಗಳನ್ನು ಕೋರಿ ವಕೀಲರಾದ ಸುನಿತಾ ತವಾನಿ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.