ಡೆಹ್ರಾಡೂನ್: ಕೇದಾರನಾಥ ದೇವಾಲಯದಲ್ಲಿ ಪಾರದರ್ಶಕ ಗಾಜಿನ ಕೋಣೆಯನ್ನು ನಿರ್ಮಿಸಲಾಗಿದ್ದು, ಇಲ್ಲಿ ಭಕ್ತರು ನೀಡಿದ ಕಾಣಿಕೆಗಳು ಮತ್ತು ದೇಣಿಗೆಗಳನ್ನು ಎಣಿಸಲಾಗುತ್ತದೆ ಎಂದು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.
ದೇವಸ್ಥಾನದಲ್ಲಿ ನಡೆಯುವ ವಹಿವಾಟಿನಲ್ಲಿ ಸಂಪೂರ್ಣ ಆರ್ಥಿಕ ಪಾರದರ್ಶಕತೆ ಇರಬೇಕೆಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
'ಪಾರದರ್ಶಕ ಎಣಿಕೆ ಕೊಠಡಿ'ಯನ್ನು ಸೋಮವಾರ ಪೂಜೆ ಸಲ್ಲಿಸಿ ಉದ್ಘಾಟಿಸಿದ ನಂತರ ಔಪಚಾರಿಕವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇದರಲ್ಲಿ ಬಿಕೆಟಿಸಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಚಂದ್ರ ತಿವಾರಿ ಮತ್ತು ಕೇದಾರ ಸಭಾದ ಅಧ್ಯಕ್ಷ ರಾಜ್‌ಕುಮಾರ್ ತಿವಾರಿ ಭಾಗವಹಿಸಿದ್ದರು ಎಂದು ಅಜಯ್ ಹೇಳಿದರು.
ದೇವಾಲಯದಲ್ಲಿ ಭಕ್ತರು ನೀಡುವ ಕಾಣಿಕೆ ಸೇರಿದಂತೆ ಎಲ್ಲಾ ಹಣಕಾಸಿನ ವ್ಯವಹಾರಗಳ ಮೇಲೆ ನಿಗಾ ಇಡಲು ಗಾಜಿನ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ. ಭಕ್ತರೊಬ್ಬರು ನೀಡಿದ ದೇಣಿಗೆಯಿಂದ ಬಿಕೆಟಿಸಿ ವತಿಯಿಂದ ಈ ಗಾಜಿನ ಕೊಠಡಿಯನ್ನು ನಿರ್ಮಿಸಲಾಗಿದೆ ಎಂದು ಅಜಯ್ ತಿಳಿಸಿದರು.