ನವದೆಹಲಿ: 'ಹಲಾಲ್ ಪ್ರಮಾಣಿಕೃತ' ಚಹಾ ಪೊಟ್ಟಣ (ಟೀ ಬ್ಯಾಗ್) ನೀಡಿದ್ದಾಗಿ ಆರೋಪಿಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರೊಬ್ಬರು ರೈಲ್ವೆ ಸಿಬ್ಬಂದಿಯನ್ನು ಪ್ರಶ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬೆನ್ನಲ್ಲೇ, ರೈಲುಗಳಲ್ಲಿ ಒದಗಿಸುವ ಚಹಾ ಸಂಪೂರ್ಣ ಸಸ್ಯಾಹಾರಿ ಎಂದು ಭಾರತೀಯ ರೈಲ್ವೆ ಸ್ಪಷ್ಟೀಕರಣ ನೀಡಿದೆ.
'ಹಲಾಲ್ ಪ್ರಮಾಣಿಕೃತ ಚಹಾ ಪೊಟ್ಟಣ ನೀಡಿದ್ದರಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ' ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ರೈಲ್ವೆಯಲ್ಲಿ ನೀಡಲಾಗುವ ಚಹಾ ಅಂತರರಾಷ್ಟ್ರೀಯ ಗುಣಮಟ್ಟದ್ದಾಗಿರುತ್ತದೆ. ಹೀಗಾಗಿ ದೇಶದಲ್ಲಿ ಬಳಸುವ ಮತ್ತು ವಿದೇಶಗಳಿಗೆ ರಫ್ತು ಮಾಡುವ ಉದ್ದೇಶದಿಂದ ಚಹಾ ಪೊಟ್ಟಣಗಳ ಮೇಲೆ ಭಾರತದ ಎಫ್‌ಎಸ್‌ಎಸ್‌ಎಐ ಪ್ರಮಾಣೀಕರಣದೊಂದಿಗೆ ಐಎಸ್‌ಒ, ಹಲಾಲ್ ಮುಂತಾದ ಪ್ರಮಾಣೀಕರಣವನ್ನೂ ಚಹಾ ತಯಾರಿಕಾ ಸಂಸ್ಥೆಗಳು ನಮೂದಿಸಿರುತ್ತವೆ ಎಂದು ರೈಲ್ವೆ ಪ್ರಕಟಣೆಯೊಂದರಲ್ಲಿ ತಿಳಿಸಿದೆ.