ನವದೆಹಲಿ: ಹಿರಿಯ ಮಹಿಳಾ ಟಿವಿ ಪತ್ರಕರ್ತೆಯ ವಿರುದ್ಧ ಸಾಮಾಜಿಕ ಮಾಧ್ಯಮದ ಮೂಲಕ ಅವಹೇಳನಕಾರಿ ಟೀಕೆ ಮಾಡಿ ಪೋಸ್ಟ್ ಮಾಡಿದ ಆರೋಪದಡಿ ಮಾಜಿ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮಾಜಿ ಉಪ ನ್ಯಾಯಾಧೀಶ ಎಸ್ ಸುದೀಪ್ ಅವರು ಇತ್ತೀಚಿನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಹಿಳಾ ಟಿವಿ ನಿರೂಪಕರೊಬ್ಬರ ವಿರುದ್ಧ ವಿಡಂಬನಾತ್ಮಕ ಸುದ್ದಿ ವಿಶ್ಲೇಷಣೆ ಕಾರ್ಯಕ್ರಮವನ್ನು ಟೀಕಿಸಿದ್ದು ಮಾತ್ರವಲ್ಲದೇ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದರು. ಸುದೀಪ್ ಅವರ ಈ ಪೋಸ್ಟ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಮಾಜಿ ಜಡ್ಜ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 354 ಎ (iv) (ಲೈಂಗಿಕ ಬಣ್ಣದ ಟೀಕೆಗಳನ್ನು ಮಾಡುವುದು) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ ವಾರ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸುದೀಪ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.