ಎರ್ನಾಕುಳಂ: ಭಾರೀ ಸಂಚಲನ ಸೃಷ್ಟಿಸಿದ್ದ ಮುವಾಟ್ಟುಪುಳ ನ್ಯೂಮನ್ ಕಾಲೇಜಿನ ಶಿಕ್ಷಕ ಪ್ರೊ. ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣದಲ್ಲಿ ಆರು ಆರೋಪಿಗಳು ತಪ್ಪಿತಸ್ಥರೆಂದು ಕೊಚ್ಚಿಯ ಎನ್.ಐ.ಎ. ನ್ಯಾಯಾಲಯ ಬುಧವಾರ(ಇಂದು) ತೀರ್ಪು ನೀಡಿದೆ.
ಎರಡನೇ ಆರೋಪಿ ಸಜಿಲ್, ಮೂರನೇ ಆರೋಪಿ ಎಂ.ಕೆ. ನಾಸರ್, ಐದನೇ ಆರೋಪಿ ನಜೀಬ್, ಒಂಬತ್ತನೇ ಆರೋಪಿ ನೌಶಾದ್, 11ನೇ ಆರೋಪಿ ಮೊಯ್ತೀನ್ ಕುಂಞÂ ಮತ್ತು 12ನೇ ಆರೋಪಿ ಅಯೂಬ್ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಅಜೀಜ್ ಒಡಕಲಿ, ಶಫೀಕ್, ಮೊಹಮ್ಮದ್ ರಫಿ, ಜುಬೇರ್ ಮತ್ತು ಮನ್ಸೂರ್ ಅವರನ್ನು ಖುಲಾಸೆಗೊಳಿಸಿದೆ. ಕೊಚ್ಚಿಯ ವಿಶೇಷ ಎನ್‍ಐಎ ನ್ಯಾಯಾಲಯ ಈ ತೀರ್ಪು ನೀಡಿದೆ.
ಪ್ರಮುಖ ಆರೋಪಿ ನಾಸರ್ ಸೇರಿದಂತೆ ನಾಲ್ವರು ಘಟನೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. ಶಿಕ್ಷೆಯನ್ನು ಕಡಿಮೆ ಮಾಡುವಂತೆ ಆರೋಪಿಗಳು ನ್ಯಾಯಾಲಯವನ್ನು ಕೋರಿದ್ದರು. ಆದರೆ ಆರೋಪಿಗಳು ಕರುಣೆಗೆ ಅರ್ಹರಲ್ಲ ಎಂದು ಎನ್‍ಐಎ ನ್ಯಾಯಾಲಯದಲ್ಲಿ ವಾದಿಸಿದೆ. ನೌಶಾದ್, ಮೊಯ್ತೀನ್ ಕುಂಞÂ ಮತ್ತು ಅಯ್ಯೂಬ್ ದುಷ್ಕರ್ಮಿಗಳಿಗೆ ಸಹಾಯ ಮಾಡಿರುವುದು ಕೂಡ ಸಾಬೀತಾಗಿದೆ. ಗುರುವಾರ ಮೂರು ಗಂಟೆಗೆ ಪ್ರಕರಣದ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಲಿದೆ.
ಮತದ ಮೇಲಿನ ಕುರುಡು ನಂಬಿಕೆಯ ಹೆಸರಿನಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಪ್ರಕರಣದ ತೀರ್ಪಿನ ಬಳಿಕ ಪ್ರೊ. ಟಿ.ಜೆ.ಜೋಸೆಫ್ ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳಿಗೆ ಶಿಕ್ಷೆ ನೀಡುವುದರಿಂದ ಸಂತ್ರಸ್ತನಿಗೆ ನ್ಯಾಯ ದೊರಕಿದಂತೆ ಎಂಬುದನ್ನು ಭಾವಿಸಲಾಗುತ್ತಿದೆ. ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂಬುದು ತಪ್ಪು ನಂಬಿಕೆಯಾಗಿದೆ ಎಂದು ಜೋಸೆಫ್ ತಿಳಿಸಿರುವರು. ಸವಾದ್ ಅವರನ್ನು ಹುಡುಕಲು ಕಾನೂನು ವ್ಯವಸ್ಥೆಯ ವೈಫಲ್ಯ ಎದ್ದು ಕಾಣಿಸುತ್ತಿದೆ. ಆತನ ಮೇಲೆ ಹಲ್ಲೆಗೆ ಸಂಚು ರೂಪಿಸಿದವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಕುರುಡು ನಂಬಿಕೆಗಳಿಗೆ ಜೋತುಬಿದ್ದವರನ್ನು ಆಧುನಿಕರು ಜಾಗೃತರನ್ನಾಗಿಸಬೇಕು. ಯುದ್ಧವನ್ನು ಗೆದ್ದ ಯಾವುದೇ ಹೋರಾಟಗಾರನಿಗೆ ನಷ್ಟವಿದೆ. ಕುರುಡು ನಂಬಿಕೆಗಳ ವಿರುದ್ದ ಇಂದಿಗೂ ಹೋರಾಟ ನಡೆಯುತ್ತಿದೆ ಎಂದು ಪ್ರೊ. ಟಿ.ಜೆ.ಜೋಸೆಫ್ ಹೇಳಿದರು.
ಘಟನೆಯ ನಂತರ ವರ್ಷಗಟ್ಟಲೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಹಲವು ಬಾರಿ ಬಂಧಿಸಲಾಗಿತ್ತು. ಅವರ ವಿರುದ್ಧ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ಎನ್ ಐಎ ವಿಚಾರಣೆ ಪೂರ್ಣಗೊಳಿಸಿದೆ. ಮೊದಲ ಹಂತದಲ್ಲಿ ವಿಚಾರಣೆಗೆ ಒಳಗಾದ 37 ಜನರ ಪೈಕಿ 11 ಮಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ 26 ಜನರನ್ನು ಖುಲಾಸೆಗೊಳಿಸಿದೆ.
ಎನ್‍ಐಎ ಚಾರ್ಜ್‍ಶೀಟ್‍ನಲ್ಲಿ ದಾಳಿಗೆ ಸಂಚು ರೂಪಿಸಿದ್ದ ಎನ್ನಲಾದ ಕುಂಜುನ್ನಿಕರ ಎಂ.ಕೆ.ನಾಸರ್ ಮತ್ತು ಆಶಾಮಣ್ಣೂರು ಸವಾದ್ ಈ ಹಿಂದೆ ತಲೆಮರೆಸಿಕೊಂಡಿದ್ದರು. ಇವರಲ್ಲದೆ ಅಝೀಝ್ ಒಡಕಲಿ, ಶಫೀಕ್, ನಜೀಬ್, ಮಹಮ್ಮದ್ ರಫಿ, ಜುಬೇರ್, ನೌಶಾದ್, ಮನ್ಸೂರ್, ಮೊಯ್ತೀನ್ ಕುಂಞ ಮತ್ತು ಅಯ್ಯೂಬ್ ಅವರನ್ನು ಎರಡನೇ ಹಂತದಲ್ಲಿ ವಿಚಾರಣೆ ನಡೆಸಲಾಯಿತು.