ಕೋಝಿಕ್ಕೋಡ್: ಕೋಝಿಕ್ಕೋಡ್ ಜಿಲ್ಲೆಯೊಂದರ ಪಂಚಾಯತಿ ಸೋಮವಾರ ಪಂಚಾಯತಿ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಯಿತು. ಬೀದಿ ನಾಯಿಗಳ ಹಾವಳಿ ಮಿತಿಮೀರಿರುವ ಹಿನ್ನೆಲೆಯಲ್ಲಿ ಪಂಚಾಯತಿ ಶಾಲೆಗಳಿಗೆ ರಜೆ ಘೋಷಿಸಿದೆ.
ಕೋಝಿಕ್ಕೋಡ್ ಜಿಲ್ಲೆಯ ಕೂತಲಿ ಪಂಚಾಯತಿ ವ್ಯಾಪ್ತಿಯ ಶಾಲೆಗಳಿಗೆ ಸೋಮವಾರ ರಜೆ ನೀಡಲಾಗಿತ್ತು. ಈ ಪಂಚಾಯಿತಿಯಲ್ಲಿ ಹಲವು ಮಂದಿ ಬೀದಿ ನಾಯಿಗಳ ದಾಳಿಗೆ ತುತ್ತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಭಾನುವಾರ ಸಂಜೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೀದಿನಾಯಿಯೊಂದು ಐವರಿಗೆ ಕಚ್ಚಿತ್ತು. ಗಾಯಾಳುಗಳನ್ನು ಪೆರಂಬ್ರಾ ತಾಲೂಕು ಆಸ್ಪತ್ರೆ ಹಾಗೂ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರೊಬ್ಬರ ಗಾಯಗಳೂ ಗಂಭೀರವಾಗಿಲ್ಲ ಎಂದು ವರದಿಯಾಗಿದೆ. ಆದರೆ ನಾಯಿ ಇನ್ನೂ ಸಿಕ್ಕಿಲ್ಲ.
ಇದೇ ವೇಳೆ, ಸೋಮವಾರ ತಿರುವನಂತಪುರದ ಅಟ್ಟಿಂಗಲ್ ನಲ್ಲಿ ನಾಲ್ಕು ವರ್ಷದ ಬಾಲಕಿ ಬೀದಿ ನಾಯಿಯಿಂದ ಗಾಯಗೊಂಡಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಹಿತ್ತಲಲ್ಲಿ ಆಟವಾಡುತ್ತಿದ್ದಾಗ ನಾಯಿ ದಾಳಿ ಮಾಡಿದೆ. ಮಗುವಿನ ಮುಖ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ.