ಗುವಾಹಟಿ: ಉದ್ವಿಗ್ನ ವಾತಾವರಣದ ನಡುವೆಯೇ ಹಿಂಸಾಚಾರ ಬಾಧಿತ ಮಣಿಪುರಕ್ಕೆ ಸೋಮವಾರ ಸುಮಾರು 700 ಟನ್ ಅಗತ್ಯ ವಸ್ತುಗಳನ್ನು ಹೊತ್ತ ಸರಕುಸಾಗಣೆ ರೈಲು ತಲುಪಿತು.
ಗುವಾಹಟಿಯಿಂದ ಭಾನುವಾರ ನಿರ್ಗಮಿಸಿದ್ದ ಈ ರೈಲನ್ನು ಖೊಂಗ್‌ಸಂಗ್ ರೈಲ್ವೆ ನಿಲ್ದಾಣದಲ್ಲಿ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಬರಮಾಡಿಕೊಂಡರು.
'ಹಿಂಸಾಚಾರದ ಕಾರಣ ರಾಜ್ಯದಲ್ಲಿ ಅಗತ್ಯ ವಸ್ತುಗಳ ಕೊರತೆಯಾಗಿತ್ತು. ಈಗ ಬಂದಿರುವ ಅಗತ್ಯ ವಸ್ತುಗಳು ಸ್ವಲ್ಪಮಟ್ಟಿಗೆ ಕೊರತೆ ನೀಗಿಸಲಿವೆ. ರೈಲು ಸೇವೆಯು ಆರಂಭವಾದರೆ ಖಂಡಿತವಾಗಿ ರಾಜ್ಯವು ಅಭಿವೃದ್ಧಿಯ ಪಥದತ್ತ ಹೊರಳಲಿದೆ' ಎಂದು ಮುಖ್ಯಮಂತ್ರಿ ಹೇಳಿದರು.
ಮೇ ಅಂತ್ಯದಲ್ಲಿ ಮಣಿಪುರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ, ಖೊಂಗ್‌ಸಂಗ್‌ವರೆಗೂ ರೈಲು ಸಂಪರ್ಕ ಸೇವೆಯನ್ನು ಕಲ್ಪಿಸುವ ಕಾಮಗಾರಿ ಚುರುಕುಗೊಳಿಸಲು ಸೂಚನೆ ನೀಡಿದ್ದರು. ಖೊಂಗ್‌ಸಂಗ್ ರೈಲು ನಿಲ್ದಾಣ ತಲುಪಿದ ಮೊದಲ ಸರಕು ಸಾಗಣೆ ರೈಲು ಇದಾಗಿದೆ.
ಮಣಿಪುರದಲ್ಲಿ ಸದ್ಯ ರೈಲು ಸಂಪರ್ಕ ಸೇವೆಯು ಜರಿಬಮ್‌ವರೆಗೂ ಲಭ್ಯವಿದೆ. ಜರಿಬಮ್ ಮತ್ತು ರಾಜಧಾನಿ ಇಂಫಾಲ್‌ವರೆಗೂ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಪುನರಾವರ್ತಿತ ಭೂಕುಸಿತ ಮತ್ತು ಇತರೆ ಕಾರಣಗಳಿಂದಾಗಿ ಹಿನ್ನಡೆಯಾಗಿದೆ.
ಹಿಂಸಾಚಾರದ ವೇಳೆ ದಿಮಾಪುರ್-ಇಂಫಾಲ್ ಹೆದ್ದಾರಿ ತಡೆಯಿಂದಾಗಿ ಅಗತ್ಯ ವಸ್ತುಗಳ ಸಾಗಣೆಗೆ ತೀವ್ರ ಹಿನ್ನಡೆಯಾಗಿತ್ತು.