ಮುಂಬೈ: 'ಹದಿಹರೆಯದವರು ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧ ಹೊಂದುವ ನಿಗದಿತ ವಯಸ್ಸಿನ ನಿರ್ಬಂಧನೆಯನ್ನು ಹಲವು ದೇಶಗಳು ಕಡಿಮೆಗೊಳಿಸಿದ್ದು; ನಮ್ಮ ದೇಶ ಮತ್ತು ಸಂಸತ್ತು ಸಹ ಅದರತ್ತ ಗಮನ ಕೊಡಬೇಕು' ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಹದಿಹರೆಯದವರ ಲೈಂಗಿಕ ಅಪರಾಧಗಳ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ನ್ಯಾಯಮೂರ್ತಿ ಭಾರತೀ ಡಾಂಗರೆ ಅವರ ಏಕ ಸದಸ್ಯ ಪೀಠ, ಜುಲೈ 10ರಂದು ಕಳವಳ ವ್ಯಕ್ತಪಡಿಸಿದೆ.
'ಲೈಂಗಿಕ ಸ್ವಾಯತ್ತತೆಯು, ಅಪೇಕ್ಷಿತ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮತ್ತು ಅನಪೇಕ್ಷಿತ ಲೈಂಗಿಕ ಆಕ್ರಮಣದಿಂದ ರಕ್ಷಿಸುವ ಹಕ್ಕನ್ನು ಒಳಗೊಂಡಿದೆ. ಹದಿಹರೆಯದವರ ಹಕ್ಕುಗಳ ಈ ಎರಡೂ ಅಂಶಗಳನ್ನು ಪರಿಗಣಿಸಿದಾಗ ಮಾತ್ರ; ಮಾನವನ ಲೈಂಗಿಕ ಘನತೆಯನ್ನು ಸಂಪೂರ್ಣವಾಗಿ ಗೌರವಿಸಿದಂತೆ' ಎಂದು ನ್ಯಾಯಪೀಠ ಹೇಳಿದೆ.
17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಿಶೇಷ ಕೋರ್ಟ್ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ, 25 ವರ್ಷದ ಯುವಕನೊಬ್ಬ ಮೇಲ್ಮನವಿ ಸಲ್ಲಿಸಿದ್ದ ಪ್ರಕರಣದ ವಿಚಾರಣೆ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ, ಸಹಮತದಿಂದಲೇ ಲೈಂಗಿಕ ಸಂಬಂಧ ಹೊಂದಿದ್ದೆವು ಎಂಬುದನ್ನು ಇಬ್ಬರೂ ತಿಳಿಸಿದ್ದರು. 'ಮುಸ್ಲಿಂ ಕಾನೂನಿನ್ವಯ ನಾನು ವಯಸ್ಕಳು. ಆರೋಪಿ ಜೊತೆಗೆ 'ನಿಖಾ' ಮಾಡಿಕೊಂಡಿರುವೆ' ಎಂದು ಬಾಲಕಿ ಹೇಳಿಕೆ ನೀಡಿದ್ದಳು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾಂಗರೆ, ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧಕ್ಕೆ ಸಾಕ್ಷಿಗಳು ಪೂರಕವಾಗಿವೆ ಎಂದು ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದರು. ಆರೋಪ ಹೊತ್ತಿದ್ದ ಯುವಕನನ್ನು ಖುಲಾಸೆಗೊಳಿಸಿ, ಜೈಲಿನಿಂದ ಬಿಡುಗಡೆಗೂ ಆದೇಶಿಸಿದರು.
'ಲೈಂಗಿಕ ಕ್ರಿಯೆಗಳು ಮದುವೆಯ ಪರಿಮಿತಿಯಲ್ಲೇ ಮಾತ್ರ ನಡೆಯದಿದ್ದರಿಂದ; ಸಮ್ಮತಿಯ ವಯಸ್ಸನ್ನು ಮದುವೆಯ ವಯಸ್ಸಿನಿಂದ ಪ್ರತ್ಯೇಕಿಸಿ ನೋಡಬೇಕಿದೆ. ಸಮಾಜದ ದೃಷ್ಟಿಯಿಂದಲೂ ಅಲ್ಲ; ನ್ಯಾಯಾಂಗ ವ್ಯವಸ್ಥೆಯೂ ಈ ಮಹತ್ವದ ಅಂಶವನ್ನು ಗಮನಿಸಬೇಕು' ಎಂದು ಹೈಕೋರ್ಟ್ ಹೇಳಿದೆ.
'ದೇಶದ ವಿವಿಧ ರಾಜ್ಯಗಳಲ್ಲಿ ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧದ ವಯಸ್ಸು ವಿವಿಧ ಕಾಲಘಟ್ಟದಲ್ಲಿ ಹೆಚ್ಚಿದೆ. 1940ರಿಂದ 2012ರವರೆಗೆ 16 ವರ್ಷ ನಿಗದಿಯಾಗಿತ್ತು. ಪೊಕ್ಸೊ ಕಾಯ್ದೆ ಜಾರಿಗೊಂಡ ಬಳಿಕ ಇದು 18 ವರ್ಷಕ್ಕೆ ನಿಗದಿಯಾಗಿದೆ. ಪ್ರಪಂಚದಲ್ಲಿನ ರಾಷ್ಟ್ರಗಳಲ್ಲಿ ನಮ್ಮಲ್ಲೇ ವಯಸ್ಸಿನ ಮಿತಿ ಹೆಚ್ಚಿರೋದು. ಬಹುತೇಕ ದೇಶಗಳಲ್ಲಿ 14ರಿಂದ 16 ವರ್ಷವಿದೆ' ಎಂದಿದೆ.
ಜರ್ಮನಿ, ಇಟಲಿ, ಪೋರ್ಚುಗಲ್, ಹಂಗೇರಿಯಲ್ಲಿ 14 ವರ್ಷದ ಮಕ್ಕಳಲ್ಲಿ ಲೈಂಗಿಕತೆಗೆ ಒಪ್ಪಿಗೆ ನೀಡುವ ಸಾಮರ್ಥ್ಯ ಇದೆ ಎಂದು ಪರಿಗಣಿಸಲಾಗಿದೆ. ಲಂಡನ್ ಮತ್ತು ವೇಲ್ಸ್‌ನಲ್ಲಿ ಸಮ್ಮತಿಯ ವಯಸ್ಸು 16 ಇದ್ದರೆ, ಜಪಾನ್‌ನಲ್ಲಿ 13 ವರ್ಷವಿದೆ ಎಂದು ನ್ಯಾಯಾಲಯ ಹೇಳಿದೆ.