ಸಿಡ್ನಿ: ಪಶ್ಚಿಮ ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಬೃಹದಾಕಾರದ ವಸ್ತುವೊಂದು ಬಂದು ಬಿದ್ದಿದ್ದು, ಇದು ಇದೇ ಜುಲೈ 14ರಂದು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾರಿಸಿದ ಚಂದ್ರಯಾನ-3ರದ್ದೇ ಅಥವಾ 2014ರ ಮಾರ್ಚ್ 8ರಂದು ಕಣ್ಮರೆಯಾದ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್ 370ರದ್ದೇ ಎಂಬ ಗೊಂದಲ ಉಂಟಾಗಿದೆ.
ಈ ವಸ್ತು ಸುಮಾರು 2.5 ಮೀ. ಅಗಲ ಹಾಗೂ 3 ಮೀ. ಉದ್ದವಿದೆ. ಇಲ್ಲಿನ ಗ್ರೀನ್ ಹೆಡ್ ಕಡಲತೀರದಲ್ಲಿ ದೊರೆತಿರುವ ಈ ವಸ್ತುವಿನ ಸಮೀಪ ಯಾರೂ ಹೋಗದಂತೆ ಪೊಲೀಸರು ನಿರ್ಬಂಧಿಸಿದ್ದಾರೆ. ಈ ವಸ್ತು ಏನಿರಬಹುದು ಎಂಬುದನ್ನು ಪತ್ತೆ ಮಾಡಲು ವಿವಿಧ ಇಲಾಖೆಗಳ ಹಾಗೂ ತಜ್ಞರ ಸಲಹೆಯನ್ನು ಪೊಲೀಸರು ಪಡೆಯುತ್ತಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಇದು ಬಾಹ್ಯಾಕಾಶಕ್ಕೆ ಹಾರಿಸಿದ ರಾಕೇಟ್‌ನ ಇಂಧನ ಟ್ಯಾಂಕ್ ಇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಹಿಂದೂಮಹಾಸಾಗರಕ್ಕೆ ಬಿದ್ದಿರುವ ಈ ವಸ್ತು, ತೇಲಿ ಆಸ್ಟ್ರೇಲಿಯಾ ಕಡಲ ತೀರ ಸೇರಿರುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಅಥವಾ ಅಕ್ಕಪಕ್ಕದ ರಾಷ್ಟ್ರಗಳ ಇಂಥ ಸಂಸ್ಥೆಗಳೊಂದಿಗೆ ಆಸ್ಟ್ರೇಲಿಯಾ ಪೊಲೀಸರು ಸಂಪರ್ಕ ಬೆಳೆಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಕೆಲವರು ಇದು ಎಂಎಚ್ 370 ವಿಮಾನಕ್ಕೆ ಸೇರಿದ್ದು ಎಂದು ಹೇಳುತ್ತಿದ್ದಾರೆ. 2014ರಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ತೀರದಲ್ಲಿ ಅದು ಪಥನಗೊಂಡಿತ್ತು. ಹೀಗಾಗಿ ಅದು ತೇಲಿಕೊಂಡು ಕಡಲ ತೀರ ಸೇರಿರುವ ಸಾಧ್ಯತೆ ಇದೆ ಎಂದೆನ್ನಲಾಗಿದೆ. ಆದರೆ ಬಿಬಿಸಿಯ ವಿಮಾನಯಾನ ಪರಿಣಿತ ಜೆಫ್ರಿ ಥಾಮಸ್ ಈ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಜತೆಗೆ ಇದು ಬೋಯಿಂಗ್ 777 ಅಥವಾ ಇತರ ಯಾವುದೇ ವಿಮಾನದ್ದಲ್ಲ ಎಂದು ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ.
2014ರ ಮಾರ್ಚ್ 8ರಂದು ಕಣ್ಮರೆಯಾದ ಮಲೇಷ್ಯಾ ವಿಮಾನಯಾನ ಸಂಸ್ಥೆಯ ಎಂಎಚ್ 370 ವಿಮಾನವು, ಕ್ವಾಲಾಲಂಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೀನಾದ ಬೀಜಿಂಗ್ ಕಡೆ ಪ್ರಯಾಣ ಬೆಳೆಸಿತ್ತು. ಟೇಕ್‌ಆಫ್ ಆದ ಅರ್ಧ ಗಂಟೆಯಲ್ಲೇ ರ‍್ಯಾಡಾರ್ ಸಂಪರ್ಕವನ್ನು ವಿಮಾನ ಕಳೆದುಕೊಂಡಿತ್ತು. ನಂತರ ಎಷ್ಟೇ ಹುಡುಕಿದರೂ ಈ ವಿಮಾನದ ಕುರುಹು ಸಿಗಲಿಲ್ಲ. ವಿಮಾನಯಾನ ಇತಿಹಾಸದಲ್ಲಿ ಇದೊಂದು ಕೌತುಕವಾಗಿಯೇ ಉಳಿದಿದೆ.