ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಅಧಿಕಾರದ ದುರಾಸೆಯಿಂದಾಗಿ ಬ್ಯಾಂಕಿಂಗ್ ಕ್ಷೇತ್ರ ವಿನಾಶದತ್ತ ಸಾಗಿತು. ಆದರೆ, ತಮ್ಮ ಸರ್ಕಾರ ಅದನ್ನು ಉತ್ತಮ ಆರ್ಥಿಕ ಸ್ಥಿತಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ರೋಜ್‌ಗಾರ್ ಯೋಜನೆಯಡಿ ವಿವಿಧ ಉದ್ಯೋಗಗಳಿಗೆ ಹೊಸದಾಗಿ ನೇಮಕವಾಗಿರುವ ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಿಸಿ, ವಿಡಿಯೊ ಕಾನ್ಫರೆನ್ಸ್ ಮೂಲಕ ಅವರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮ ಭಾರತವು ಈಗ ಪ್ರಬಲ ಬ್ಯಾಂಕಿಂಗ್ ಕ್ಷೇತ್ರಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
'ಫೋನ್ ಬ್ಯಾಂಕಿಂಗ್' ಹಿಂದಿನ ಸರ್ಕಾರದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳು ಮಾಡಿತು. ಕೆಲವು ಪ್ರಬಲ ನಾಯಕರು ಮತ್ತು ಕುಟುಂಬಗಳ ನೆಚ್ಚಿನವರಿಗೆ ಸಾವಿರಾರು ಕೋಟಿ ರೂಪಾಯಿಗಳ ಸಾಲವನ್ನು ನೀಡಲಾಯಿತು ಮತ್ತು ಆ ಸಾಲಗಳನ್ನು ಎಂದಿಗೂ ಹಿಂತಿರುಗಿಸುವ ಉದ್ದೇಶವೇ ಇರಲಿಲ್ಲ ಎಂದು ಹೇಳಿದರು.
ತಮ್ಮ ಸರ್ಕಾರವು ಬ್ಯಾಂಕುಗಳ ನಿರ್ವಹಣೆ ಬಲಪಡಿಸುವುದು, ಸಣ್ಣ ಬ್ಯಾಂಕುಗಳನ್ನು ವಿಲೀನಗೊಳಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರತಿಪಾದಿಸಿದರು.
ಸಾರ್ವಜನಿಕ ವಲಯದ ಬ್ಯಾಂಕುಗಳು ಈ ಹಿಂದೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಮತ್ತು ಅನುತ್ಪಾದಕ ಆಸ್ತಿಗಳಿಗೆ (ಎಪಿಎಎಸ್) ಹೆಸರುವಾಸಿಯಾಗಿದ್ದವು. ಆದರೆ, ಈಗ ಅವು ದಾಖಲೆಯ ಲಾಭಕ್ಕೆ ಹೆಸರುವಾಸಿಯಾಗಿವೆ ಎಂದು ಪ್ರಧಾನಿ ಹೇಳಿದರು.
2004-14ರ ಅವಧಿಯಲ್ಲಿ ಯುಪಿಎ ಅಧಿಕಾರದಲ್ಲಿತ್ತು.
30 ಲಕ್ಷ ಹುದ್ದೆ ಖಾಲಿ- ಕಾಂಗ್ರೆಸ್: ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ನೀಡುವ ಬಿಜೆಪಿಯ ಭರವಸೆಯನ್ನು ಈಡೇರಿಸಲಾಗುತ್ತಿದೆಯೇನೋ ಎಂಬಂತೆ, ನೇಮಕಾತಿ ಪತ್ರಗಳನ್ನು ಕಂತುಗಳಲ್ಲಿ ವಿತರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಶನಿವಾರ ರೋಜ್‌ಗಾರ್ ಮೇಳ ನಡೆಸುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದು, ಈಗ ಮಂಜೂರಾದ ಹುದ್ದೆಗಳನ್ನು ಬಹಳ ಹಿಂದೆಯೇ ಭರ್ತಿ ಮಾಡಬೇಕಿತ್ತು ಎಂದಿದ್ದಾರೆ.
ಕೇವಲ ಮೂರು ವರ್ಷಗಳಲ್ಲಿ ದೇಶದಲ್ಲಿ ಸುಮಾರು 20,000 ಎಂಎಸ್‌ಎಂಇ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ ಎಂದು ಹೇಳಿದ್ದಾರೆ.