ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿಯ ಕಾಯಿಮಲೆಯಿಂದ ಕಿನ್ನಿಂಗಾರಿಗೆ ಕೇವಲ 3 ಕಿಲೋಮೀಟರ್ ದೂರ. ಆದರೆ ಪೆರ್ವತ್ತೋಡಿಯಲ್ಲಿ ಸೇತುವೆ ಇಲ್ಲದ ಕಾರಣ ಕಾಯಿಮಲೆಯ ಜನರು ಕಿನ್ನಿಂಗಾರಿಗೆ ಬರಲು ಸುಮಾರು 13 ಕಿಲೋಮೀಟರ್ ಸುತ್ತು ಬಳಸಿ ಬರಬೇಕಾಗಿದೆ. ಪೆರ್ವತ್ತೋಡಿಯ ತೋಡಿಗೆ ನೂತನ ಸೇತುವೆಯ ಕನಸು ಇನ್ನೂ ಸಾಕಾರಗೊಂಡಿಲ್ಲ. ಇದೀಗ ಅನಿವಾರ್ಯವಾಗಿ ಪ್ರದೇಶವಾಸಿಗಳು ಪೆರ್ವತ್ತೋಡಿಯ ತೋಡಿಗೆ ಅಡಿಕೆ ಮರದ ಸೇತುವೆ ನಿರ್ಮಿಸಿ, ಆತಂಕದಿಂದಲೇ ದಾಟಿಕೊಂಡು ನಿತ್ಯ ವ್ಯವಹಾರಗಳನ್ನು ನಿರ್ವಹಿಸುತ್ತಾರೆ. ಇದೇ ಅಡಿಕೆ ಮರದ ಸೇತುವೆಯ ಮೂಲಕ ಅನೇಕ ಶಾಲಾ ಮಕ್ಕಳು ಹಾಗೂ ಮಹಿಳೆಯರು ಪ್ರತೀದಿನ ಸಂಚರಿಸುತ್ತಾರೆ.
ಪೆರ್ವತ್ತೋಡಿ ತೋಡಿನ ಒಂದು ಭಾಗ ಬೆಳ್ಳೂರು ಗ್ರಾಮ ಪಂಚಾಯಿತಿನ 11ನೇ ವಾರ್ಡ್ ಆಗಿರುವ ಕಾಯಿಮಲೆಯಾಗಿದ್ದು, ಇನ್ನೊಂದು ಭಾಗವು 12ನೇ ವಾರ್ಡ್ ಆಗಿರುವ ಪೆರ್ವತ್ತೋಡಿಯ ವ್ಯಾಪ್ತಿಯಲ್ಲಿದೆ. ಈ ತೋಡಿಗೆ ಶಾಶ್ವತ ಸೇತುವೆಯ ಜನತೆಯ ಕನಸು ಇನ್ನೂ ನೆರವೇರಿಲ್ಲ. ಈ ಪ್ರದೇಶದಿಂದ ಪ್ರತೀ ದಿನ ನೂರಾರು ಮಕ್ಕಳು ಅಂಗನವಾಡಿ, ಶಾಲೆ ಹಾಗೂ ಕಾಲೇಜಿಗೆ ತೆರಳುತ್ತಾರೆ. ಸರ್ಕಾರಿ ಕಚೇರಿಗಳು, ಪಡಿತರ ಅಂಗಡಿ, ಬ್ಯಾಂಕ್ ಸಹಿತ ಎಲ್ಲಾ ಅಗತ್ಯಗಳಿಗೆ ಈ ಪ್ರದೇಶದ ಮಂದಿಗೆ ಕಿನ್ನಿಂಗಾರಿಗೆ ಬರಲೇಬೇಕು. ಇವರೆಲ್ಲರೂ ಈ ಅಡಿಕೆ ಮರದ ಸೇತುವೆಯ ಮೂಲಕವೇ ಸಂಚರಿಸುತ್ತಾರೆ. ಯಾವುದೇ ಸುರಕ್ಷಾ ವ್ಯವಸ್ಥೆ ಇಲ್ಲದ ಸೇತುವೆಯನ್ನು ದಾಟಿಸಲು ಪೆÇೀಷಕರೂ ಕೂಡಾ ಮಕ್ಕಳ ಜತೆಗೆ ದಿನಕ್ಕೆ ಎರಡು ಬಾರಿ ಬರಬೇಕಾಗುತ್ತದೆ.
ಪೆರ್ವತ್ತೋಡಿಯಲ್ಲಿ ಶಾಶ್ವತ ಕಾಂಕ್ರಿಟ್ ಸೇತುವೆ ನಿರ್ಮಿಸಲು ಸಂಸದರಿಗೆ ಹಾಗೂ ಶಾಸಕರಿಗೆ ಮನವಿ ನೀಡಲಾಗಿದೆ. ಕಾಸರಗೋಡು ಅಭುವೃದ್ಧಿ ಪ್ಯಾಕೇಜಿನಲ್ಲಿ ಯೋಜನೆ ಸಿದ್ಧವಾಗಿದ್ದರೂ, ಅನುದಾನ ಮಂಜೂರಾಗಿಲ್ಲ. ಇದೀಗ ನೂತನ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಸೇತುವೆ ನಿರ್ಮಿಸಲು ಪೂರಕ ಕ್ರಮ ದೊರೆಯುವ ನಿರೀಕ್ಷೆ ಇದೆ ಎಂದು ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಎಂ ಬೆಳ್ಳೂರು ಹೇಳುತ್ತಾರೆ. ಸಮೀಪದ ದಾರಿ ಇರುವಾಗ ಶಾಲಾ ಮಕ್ಕಳು, ವೃದ್ಧರು, ರೋಗಿಗಳನ್ನು ಸುತ್ತು ಬಳಸಿದ ರಸ್ತೆಯಲ್ಲಿ ಕರೆದೊಯ್ಯುವ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಭಿಮತ:
ಶಾಶ್ವತ ಸೇತುವೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಬೇಕಾಗಿಬರಲಿದೆ. ಇಷ್ಟು ದೊಡ್ಡ ಮೊತ್ತ ಬಳಸಲು ಗ್ರಾಮ ಪಂಚಾಯತಿಗೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಂಸದರು, ಶಾಸಕರಿಗೆ ನಿರಂತರ ಮನವಿ ನೀಡಿದ್ದÀರೂ ಅನುಮೋದನೆಗೊಂಡಿಲ್ಲ. ಇದೀಗ ಕಾಸರಗೋಡು ಅಭಿವೃದ್ದಿ ಪ್ಯಾಕೇಜ್ ಗೆ ಮನವಿ ಮಾಡಲಾಗಿದ್ದು, ಅವರ ಸಮೀಕ್ಷೆಯ ನಿರೀಕ್ಷೆಯಲ್ಲಿದ್ದೇವೆ.
-ಶ್ರೀಧರ ಎಂ.
ಅಧ್ಯಕ್ಷರು.ಬೆಳ್ಳೂರು ಗ್ರಾಮ ಪಂಚಾಯತಿ.