ತಿರುವನಂತಪುರಂ: ನವಜಾತ ಶಿಶುವನ್ನು ಕೊಲೆಗೈದು ಮೃತದೇಹವನ್ನು ಮನೆಯ ಹಿಂದೆ ಹೂತಿಟ್ಟ 40 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಹೀನ ಕೃತ್ಯವನ್ನು ಎಸಗಿದ ಮಹಿಳೆಯನ್ನು ಜೂಲಿ ಎಂದು ಗುರುತಿಸಲಾಗಿದ್ದು, ತಿರುವನಂತಪುರಂದ ಅಂಕುತೆಂಗು ಗ್ರಾಮದ ನಿವಾಸಿಯಾಗಿದ್ದಾಳೆ.
ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವಿನ ಮೃತದೇಹವನ್ನು ವಶಪಡಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಮೊದಲಿಗೆ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಜೂಲಿಯನ್ನು ಬಂಧಿಸಿದೆ. ಆರಂಭದಲ್ಲಿ ಆಕೆ ಆರೋಪಗಳನ್ನು ನಿರಾಕರಿಸಿದರೂ, ಪೊಲೀಸರು ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸಿದ ನಂತರ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ವಿಧವೆಯಾಗಿದ್ದರೂ ಹೆರಿಗೆಯಾಗಿತ್ತು. ಹಾಗಾಗಿ ಅವಮಾನಕ್ಕೆ ಹೆದರಿ ಕೊಲೆ ಮಾಡಿರುವುದಾಗಿ ಆರೋಪಿ ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾಳೆ.