ನವದೆಹಲಿ(PTI): 2014ರ ನಂತರ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಶೇ 82ರಷ್ಟು, ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿ ಶೇ 110ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಶುಕ್ರವಾರ ತಿಳಿಸಿದ್ದಾರೆ.
ನವದೆಹಲಿ(PTI): 2014ರ ನಂತರ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಶೇ 82ರಷ್ಟು, ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿ ಶೇ 110ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಶುಕ್ರವಾರ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಮಾಂಡವಿಯಾ, ಇದಕ್ಕೆ ಸಂಬಂಧಿಸಿದ ಅಂಕಿಆಂಶಗಳನ್ನು ಸದನದಲ್ಲಿ ನೀಡಿದರು.
2014ರಲ್ಲಿ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. ಈಗ 704 ಕಾಲೇಜುಗಳಿವೆ. ಇದೇ ಅವಧಿಯಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 51,348 ರಿಂದ 1,07,948ಕ್ಕೆ (ಶೇ 110ರಷ್ಟು ಹೆಚ್ಚಳ) ಏರಿದೆ. 2014ಕ್ಕೂ ಮೊದಲು 31,185 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿದ್ದವು. ಈಗ 67,802ಕ್ಕೆ (ಶೇ 117ರಷ್ಟು ಹೆಚ್ಚಳ) ಏರಿವೆ ಎಂದು ಮಾಂಡವಿಯಾ ತಿಳಿಸಿದರು.
'ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್‌ಎಸ್) ಅಡಿಯಲ್ಲಿ ಕಳೆದ ಐದು ವರ್ಷಗಳಲ್ಲಿ 101 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಒಂದು ಕಾಲೇಜನ್ನು ಅಸ್ಸಾಂಗೆ ನೀಡಲಾಗಿದೆ. ವೈದ್ಯಕೀಯ ಕಾಲೇಜುಗಳ ಜತೆ ಜತೆಗೇ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನೂ ಏರಿಸಲಾಗಿದೆ' ಎಂದೂ ಅವರು ತಿಳಿಸಿದರು.
ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳು ಇಲ್ಲದ, ತೀರಾ ಹಿಂದುಳಿದ ಜಿಲ್ಲೆಗಳಿಗೆ ಕೇಂದ್ರದ ಆರೋಗ್ಯ ಇಲಾಖೆಯು ಸಿಎಸ್‌ಎಸ್ ಅಡಿಯಲ್ಲಿ ಕಾಲೇಜುಗಳನ್ನು ಮಂಜೂರು ಮಾಡುತ್ತದೆ. ಈಶಾನ್ಯ ರಾಜ್ಯಗಳ ವೈದ್ಯಕೀಯ ಕಾಲೇಜುಗಳಿಗೆ 90:10 (ಕೇಂದ್ರ-ರಾಜ್ಯ) ಅನುಪಾತದಲ್ಲಿ ಅನುದಾನ ಸಿಕ್ಕರೆ, ಇತರ ರಾಜ್ಯಗಳಲ್ಲಿ 60:40ರ ಅನುಪಾತದ ಅನುದಾನ ಲಭ್ಯವಾಗುತ್ತದೆ.
ಮೂರು ಹಂತಗಳಲ್ಲಿ ಒಟ್ಟು 157 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ-ಆಧುನೀಕರಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದರಲ್ಲಿ ಐದು ಕಾಲೇಜುಗಳನ್ನು ಅಸ್ಸಾಂಗೆ ನೀಡಲಾಗಿದೆ. 157ರಲ್ಲಿ 107 ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ತಿಳಿಸಿದ್ದಾರೆ.