ಪೆರ್ಲ: ಚೆರ್ಕಳ-ಕಲ್ಲಡ್ಕ ಅಂತರ್ ರಾಜ್ಯ ರಸ್ತೆಯಲ್ಲಿ ಬರುವ ಸಾರಡ್ಕ ಬಳಿ ಗುಡ್ಡ ಜರಿಯುತ್ತಿರುವುದು ವರ್ಷಂಪ್ರತಿ ಪುನರಾವರ್ತಿಸುತ್ತಿದ್ದು ಇಂದು ಬೆಳಿಗ್ಗೆ 8 ಕ್ಕೆ ಮತ್ತೆ ಗುಡ್ಡ ಜರಿದು ಅಲ್ಪಹೊತ್ತು ಸಂಚಾರ ನಿಯಂತ್ರಣಕ್ಕೊಳಪಟ್ಟಿತು. ಈ ಸಂದರ್ಭದಲ್ಲಿ ವಾಹನ ಸಂಚಾರ ವಿರಳವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಿದ್ದು ರಸ್ತೆಗೆ ಮೇಲಿನ ಗುಡ್ಡದಿಂದ ಮಣ್ಣು ಸಮೇತ ಮರ ಜರಿದು ಅಡ್ಡಲಾಗಿ ಬಿದ್ದುದರಿಂದ ಅಲ್ಪ ಕಾಲ ರಸ್ತೆ ತಡೆಯಾಗಿತ್ತು.
ಬಳಿಕ ಸ್ಥಳೀಯರು ಒಗ್ಗೂಡಿ ತಡೆ ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು. ಕಳೆದ ವರ್ಷ ಮಳೆಗಾಲದಲ್ಲಿ ಇದೇ ಗುಡ್ಡ ಜರಿದು ಬಿದ್ದಿದ್ದು ಮಧ್ಯಾಹ್ನನದ ವರೆಗೆ ವಾಹನ ಸಂಚಾರ ಮೊಟಕುಗೊಂಡಿತ್ತು. ಅಂತರಾಜ್ಯ ರಸ್ತೆಯಾದ ಕಾರಣ ಶಾಲಾ ಕಾಲೇಜು ಸಹಿತ ಅನೇಕರು ಈ ರಸ್ತೆಯನ್ನು ಆಶ್ರಯಿಸುತ್ತಿದ್ದು ರಸ್ತೆಯ ಮೇಲಿನ ಗುಡ್ಡಗಳು ಭೀತಿಯನ್ನುಂಟುಮಾಡುತ್ತಿದೆ.