ಲಖನೌ: 'ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ನಮ್ಮ ಪಕ್ಷದ ವಿರೋಧವಿಲ್ಲ. ಆದರೆ, ಇದನ್ನು ದೇಶದಲ್ಲಿ ಜಾರಿಗೆ ತರಲು ಬಿಜೆಪಿ ಮತ್ತು ಅದರ ನೇತೃತ್ವದ ಸರ್ಕಾರ ಅನುಸರಿಸುತ್ತಿರುವ ರೀತಿಯನ್ನು ನಾವು ಒಪ್ಪುತ್ತಿಲ್ಲ' ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಭಾನುವಾರ ಇಲ್ಲಿ ಹೇಳಿದರು.
ಕಾನೂನು ಆಯೋಗವು ಜೂನ್ 14ರಂದು ಈ ವಿಷಯದ ಬಗ್ಗೆ ಸಾರ್ವಜನಿಕ ಮತ್ತು ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯವನ್ನು ಆಹ್ವಾನಿಸಿದ ನಂತರ ಯುಸಿಸಿ ಜಾರಿ ಬಗ್ಗೆ ಮಾಯಾವತಿ ಅವರು ಮೊದಲ ಬಾರಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಎಲ್ಲ ನಾಗರಿಕರಿಗೆ ಯುಸಿಸಿ ಭದ್ರತೆ ಒದಗಿಸುತ್ತದೆ. ಆದರೆ, ಇದನ್ನು ಬಲವಂತವಾಗಿ ಹೇರಬಾರದು ಎಂದು ಹೇಳಿದ್ದಾರೆ.
'ಯುಸಿಸಿ ಅನುಷ್ಠಾನದ ವಿಚಾರದಲ್ಲಿ ಸಂಕುಚಿತ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ. ಈ ಕಾನೂನಿನ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವ ಮತ್ತು ಒಮ್ಮತಾಭಿಪ್ರಾಯದ ಮೂಲಕ ಅದನ್ನು ಅನುಷ್ಠಾನಕ್ಕೆ ತರಬೇಕು' ಎಂದು ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
'ಯುಸಿಸಿ ಜಾರಿಯಲ್ಲಿ ನಿಷ್ಪಕ್ಷಪಾತ ವಿಧಾನವನ್ನು ಬಿಜೆಪಿ ಸರ್ಕಾರ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಪಕ್ಷವು ಅದನ್ನು ವಿರೋಧಿಸುತ್ತದೆ' ಎಂದೂ ಹೇಳಿದರು.