ಕಾಸರಗೋಡು: ಮಠ ಮತ್ತು ಸಮಾಜದ ನಡುವಿನ ಸಂಬಂಧ ಮತ್ತಷ್ಟು ಬಲಗೊಳ್ಳಬೇಕಾಗಿರುವುದು ಅನಿವಾರ್ಯ ಎಂಬುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ಜುಲೈ 3ರಿಂದ ಆರಂಭಗೊಳ್ಳಲಿರುವ ತಮ್ಮ ಮೂರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಿಂದಿನಿಂದಲೂ ಶ್ರೀ ಮಠ ಕಲೆ, ಸಂಸ್ಕøತಿ, ಆಧ್ಯಾತ್ಮಿಕತೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ಚಾತುರ್ಮಾಸ್ಯ ವ್ರತಾಚರಣೆ ಕಾಲಾವಧಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನ್ರತ್ಯ, ಸಂಗೀತ, ಯಕ್ಷಗಾನ ಮುಂತಾದ ಕಲೆಗಳ ಆರಾಧನೆಯೂ ನಡೆಯಲಿದೆ. ಕಳೆದ ಮೂರು ವರ್ಷಗಳಿಂದಲೂ ಶ್ರೀಮಠದಲ್ಲೇ ಚಾತುರ್ಮಾಸ್ಯ ವ್ರತಾಚರಣೆ ನಡೆಸುತ್ತಿದ್ದು, ಇದರಿಂದ ಸಮಾಜದೊಂದಿಗಿನ ಬಾಂಧವ್ಯ ಮತ್ತಷ್ಟು ಬಲಗೊಳ್ಳಲು ಕಾರಣವಾಗಿದೆ. ಅಧಿಕ ಮಾಸದ ಹಿನ್ನೆಲೆಯಲ್ಲಿ ಈ ಬಾರಿ ಸೆ. 29ರ ವರೆಗೆ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದೆ. ಜಾತಿ, ಮತ, ಭೇದವಿಲ್ಲದೆ ಭಕ್ತಾದಿಗಳು ಶ್ರೀ ಮಠಕ್ಕೆ ಆಗಮಿಸುತ್ತಿದ್ದಾರೆ. ಸುಮಾರು ಮೂರು ತಿಂಗಳ ಕಾಲ ನಡೆಯಲಿರುವ ಚಾತುರ್ಮಾಸ್ಯ ವ್ರತಾಚರಣೆಯ ಯಶಸ್ವಿಗಾಗಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ನಾನಾ ಕಡೆ ಉಪಸಮಿತಿಗಳು ಚಟುವಟಿಕೆ ನಿರತವಾಗಿದೆ.
ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಜುಲೈ 3ರಂದು ಮಧ್ಯಾಹ್ನ 2.30ಕ್ಕೆ ಶ್ರೀ ಮಠದಲ್ಲಿ ಜರುಗಲಿದೆ. ಉದ್ಯಮಿ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಉದ್ಘಾಟಿಸುವರು. ಲೋಕಸಭಾ ಸದಸ್ಯ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಜೆ 4ರಿಂದ 'ಅಕ್ಷಯಾಂಬರ'ಯಕ್ಷಗಾನ ಬಯಲಾಟ ನಡೆಯುವುದು. ಚಾತುರ್ಮಾಸ ವ್ರತಾಚರಣೆಯ ವಿವಿಧ ದಿನಗಳಲ್ಲಿ ಸಂಸ್ಕøತಿಕ, ಧಾರ್ಮಿಕ, ವೈದಿಕ ಕಾರ್ಯಕ್ರಮ, ಭಜನೆ, ಸತ್ಸಂಗ ಜರುಗಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಯ, ವೆಂಕಟ ಭಟ್ ಎಡನೀರು, ಸಊರ್ಯ ಭಟ್ ಎಡನೀರು, ಶ್ಯಾಂ ಪ್ರಸಾದ್ ಕುಂಚಿನಡ್ಕ ಉಪಸ್ಥಿತರಿದ್ದರು.