ದಕ್ಷಿಣ ಭಾರತದ ಪ್ರಮುಖ ತಿಂಡಿಗಳಲ್ಲಿ ಇಡ್ಲಿ ಕೂಡ ಒಂದು. ನೀವೇನಾದ್ರು ದಕ್ಷಿಣ ಭಾರತಕ್ಕೆ ಬಂದು ಹೋಟೆಲ್ ನಲ್ಲಿ ಏನೆಲ್ಲಾ ತಿಂಡಿ ಇದೆ ಅಂತ ಕೇಳಿದ್ರೆ ಅಲ್ಲಿನ ಸಪ್ಲೈಯಲ್ ಇಡ್ಲಿ, ದೋಸೆ ಅಂತ ಹೇಳೋದಕ್ಕೆ ಶುರು ಮಾಡುತ್ತಾನೆ. ಅಷ್ಟರ ಮಟ್ಟಿಗೆ ದಕ್ಷಿಣ ಭಾರದಲ್ಲಿ ಜನ ಇಡ್ಲಿಯನ್ನು ನೆಚ್ಚಿಕೊಂಡು ಬಿಟ್ಟಿದ್ದಾರೆ. ಪ್ರತಿ ಮನೆಯಲ್ಲಿಯೂ ವಾರಕ್ಕೆ ಒಂದು ಬಾರಿಯಾದರೂ ಇಡ್ಲಿ ಮಾಡದೇ ಇರೋದಿಲ್ಲ.
ಇಡ್ಲಿಯನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗಿದ್ದು, ಅದನ್ನು ಹಬೆಯಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ ಬಿಸಿ ಬಿಸಿ ಸಾಂಬಾರ್ ಮತ್ತು ಕಾಯಿ ಚಟ್ನಿ ಜೊತೆಗೆ ತಿಂದರೆ ಅದರ ರುಚಿಯೇ ಬೇರೆ. ಸಾಮಾನ್ಯವಾಗಿ ದಕ್ಷಿಣ ಭಾರತೀಯರು ಹೆಚ್ಚಾಗಿ ಇಡ್ಲಿಯನ್ನು ತಿನ್ನೋದ್ರಿಂದ ದಕ್ಷಿಣ ಭಾರತದ ಯಾವುದಾದ್ರು ಒಂದು ರಾಜ್ಯದಲ್ಲಿ ಇಡ್ಲಿಯನ್ನು ಮೊದಲು ತಯಾರು ಮಾಡಲಾಗಿತ್ತು ಅಂತ ನಾವು ಅಂದುಕೊಂಡಿರ್ತೀವಿ. ಆದ್ರೆ ನಿಮ್ಮ ಕಲ್ಪನೆ ತಪ್ಪು. ಅಷ್ಟಕ್ಕು ಇಡ್ಲಿ ಮೊದಲು ತಯಾರಾಗಿದ್ದು ಯಾವ ದೇಶದಲ್ಲಿ? ಇದನ್ನು ಯಾರು ತಯಾರು ಮಾಡಿದ್ದು ಗೊತ್ತಾ? ಎಲ್ಲವನ್ನೂ ತಿಳಿಯೋಣ.ಇಂಡೋನೇಷಿಯಾದಲ್ಲಿ ಮೊದಲು ತಯಾರಾಗಿತ್ತಾ ಇಡ್ಲಿ?
ಕರ್ನಾಟಕದ ಪ್ರಸಿದ್ಧ ಆಹಾರ ವಿಜ್ಞಾನಿ ಮತ್ತು ಆಹಾರ ಇತಿಹಾಸಕಾರರಾದ ಕೆ.ಟಿ.ಆಚಾರ್ಯ ಅವರ ಪ್ರಕಾರ ಇಡ್ಲಿಯ ಮೂಲವನ್ನು ಇಂದಿನ ಇಂಡೋನೇಷ್ ಅಂತ ಹೇಳಲಾಗುತ್ತದೆ. 7 ರಿಂದ 12 ನೇ ಶತಮಾನದಲ್ಲೇ ಇಡ್ಲಿಯನ್ನು ಇಂಡೋನೇಷಿಯಾದಲ್ಲಿ ತಯಾರು ಮಾಡಲಾಗಿತ್ತಂತೆ. ಅಲ್ಲಿ ಇದನ್ನು 'ಕೆಡ್ಲಿ' ಅಥವಾ 'ಕೇದಾರಿ' ಎಂದು ಕರೆಯಲಾಗುತ್ತಿತ್ತು.
ಈ ಹಿಂದೆ ಇಂಡೋನೇಷಿಯಾ ಹಿಂದೂ ರಾಷ್ಟ್ರವಾಗಿತ್ತು. 7 ರಿಂದ 12 ನೇ ಶತಮಾನದವರೆಗೆ ಅನೇಕ ಹಿಂದೂ ರಾಜರು ಇಂಡೋನೇಷ್ಯಾವನ್ನು ಆಳಿದ್ದರು. ಅವರು ಅನೇಕ ಕಾರಣಕ್ಕಾಗಿ ಆಗಾಗ್ಗೆ ಭಾರತಕ್ಕೆ ಭೇಟಿ ನೀಡ್ತಿದ್ರು. ಆಗ ತಮ್ಮ ಜೊತೆಗೆ ಬಾಣಸಿಗರನ್ನು ಕೂಡ ಕರೆತರುತ್ತಿದ್ದರು. ಹೀಗಾಗಿ ಇಂಡೋನೇಷಿಯಾದ ಈ ಕೆಡ್ಲಿ ರೆಸಿಪಿ ಭಾರತಕ್ಕೆ ಬಂತು ಅಂತ ಹೇಳಲಾಗುತ್ತದೆ. ಜೊತೆಗೆ ಇದನ್ನು ಭಾರತದಲ್ಲಿ ಇಡ್ಲಿ ಅಂತ ಕರೆಯಲಾಗುತ್ತದೆ.
ಇಡ್ಲಿಗೂ ಅರಬ್ಬರಿಗೂ ನಂಟು ಇದ್ಯಾ? 'ಇಡ್ಲಿ' ಮೂಲದ ಇನ್ನೊಂದು ಕಥೆಯನ್ನು ನೋಡೋದಾದ್ರೆ ಇಡ್ಲಿ ಅರಬ್ಬರಿಗೂ ಐತಿಹಾಸಿಕವಾಗಿ ನಂಟು ಇದೆ. 'ಎನ್‌ಸೈಕ್ಲೋಪೀಡಿಯಾ ಆಫ್ ಫುಡ್ ಹಿಸ್ಟರಿ' ಮತ್ತು 'ಸೀಡ್ ಟು ಸಿವಿಲೈಸೇಶನ್ - ದಿ ಸ್ಟೋರಿ ಆಫ್ ಫುಡ್' ಎಂಬ ಪುಸ್ತಕದಲ್ಲಿ ಇಡ್ಲಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಭಾರತದಲ್ಲಿ ನೆಲೆಸಿದ ಅರಬ್ಬರು ಕಟ್ಟುನಿಟ್ಟಾಗಿ ಹಲಾಲ್ ಆಹಾರಗಳನ್ನು ಮತ್ತು ಅಕ್ಕಿಯಿಂದ ಮಾಡಿದ ಉಂಡೆಗಳನ್ನು ಮಾತ್ರ ಸೇವಿಸುತ್ತಿದ್ದರಂತೆ. ಈ ಅಕ್ಕಿ ಉಂಡೆಗಳು ಚಪ್ಪಟೆಯಾಗಿದ್ದು, ಅವುಗಳನ್ನು ಅವರು ತೆಂಗಿನ ಕಾಯಿ ಚಟ್ನಿ ಜೊತೆಗೆ ಸೇವಿಸುತ್ತಿದ್ದರಂತೆ.
"ವಡ್ಡಾರಾಧನೆ" ಕೃತಿಯಲ್ಲಿ ಇಡ್ಲಿಯ ಉಲ್ಲೇಖವಿದೆ!
7 ನೇ ಶತಮಾನದ ಕನ್ನಡ ಕೃತಿಯಾದ "ವಡ್ಡಾರಾಧನೆ" ಸೇರಿದಂತೆ ವಿವಿಧ ಪ್ರಾಚೀನ ಭಾರತೀಯ ಪಠ್ಯಗಳಲ್ಲಿ ಇಡ್ಲಿಯ ಬಗ್ಗೆ ಉಲ್ಲೇಖಿಸಲಾಗಿದೆ. ಇಲ್ಲಿ "ಇಡ್ಡಲಿಗೆ" ತಯಾರಿಕೆಯ ಬಗ್ಗೆ ವಿವರಿಸಲಾಗಿದೆ. ಶೈವ ಸಂತರ ಗುಂಪಿನ 63 ನಾಯನಾರ್‌ಗಳ ಜೀವನ ಕಥೆಯನ್ನು ವಿವರಿಸುವ 10 ನೇ ಶತಮಾನದ ತಮಿಳು ಪಠ್ಯ "ಪೆರಿಯ ಪುರಾಣಂ" ನಲ್ಲಿ ಕೂಡ ಇಡ್ಲಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಇನ್ನೊಂದು ಇತಿಹಾಸದ ಪ್ರಕಾರ 10 ನೇ ಶತಮಾನದಲ್ಲಿ ಘಜ್ನಿ ಮೊಹಮ್ಮದ್ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ನಂತರ ಸೌರಾಷ್ಟ್ರೀಯ ವ್ಯಾಪಾರಿಗಳು ದಕ್ಷಿಣ ಭಾರತಕ್ಕೆ ಸ್ಥಳಾಂತರಗೊಂಡರು. ಮತ್ತು ಇಡ್ಲಿಯ ಪಾಕವಿಧಾನವನ್ನು ಕಂಡುಹಿಡಿದರು ಅಂತಾನೂ ಹೇಳಲಾಗುತ್ತದೆ.
ಬಾಹ್ಯಾಕಾಶಕ್ಕೆ ಹೊತ್ತೊಯ್ದ ಮೊದಲ ಆಹಾರ!
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಭಾರತೀಯ ರಕ್ಷಣಾ ಪ್ರಯೋಗಾಲಯವಾಗಿರುವ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ (ಡಿಎಫ್‌ಆರ್‌ಎಲ್) ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಇಡ್ಲಿ, ಸಾಂಬಾರ್ ಪುಡಿ ಹಾಗೂ ಚಟ್ನಿಯನ್ನು ಹೊತ್ತೊಯ್ದಿದ್ದರಂತೆ.
ಯಾವೆಲ್ಲಾ ವಿಧದ ಇಡ್ಲಿಗಳಿದೆ? ಮೊದಲೆಲ್ಲಾ ಬರೀ ಅಕ್ಕಿ ಹಿಟ್ಟಿನಿಂದ ಇಡ್ಲಿಯನ್ನು ತಯಾರು ಮಾಡಲಾಗ್ತಿತ್ತು. ಆದ್ರೀಗ ರವಾ ಇಡ್ಲಿ, ರವಾ ಮಸಾಲಾ ಇಡ್ಲಿ ಹೀಗೆ ವಿವಿಧ ಬಗೆಯ ಇಡ್ಲಿಯನ್ನು ತಯಾರು ಮಾಡಲಾಗುತ್ತದೆ. ಅಷ್ಟೇ ಅಲ್ಲ, ಈಗಂತೂ ರೆಡಿ ಟು ಈಟ್ ಇಡ್ಲಿ ಕೂಡ ಲಭ್ಯವಾಗುತ್ತಿದೆ. ಇಡ್ಲಿ ಮೊದಲು ಎಲ್ಲಿ ತಯಾರಾದರೇನು? ಹೇಗೆ ತಯಾರಾದರೇನು? ಇಡ್ಲಿಯ ರುಚಿಗೆ ಸರಿಸಾಟಿಯಾದ ಆಹಾರ ಮತ್ತೊಂದಿಲ್ಲ ಅಂತಾನೇ ಹೇಳಬಹುದು.