ಕಾಸರಗೋಡು: ಗೋವಾದಿಂದ ಕೇರಳಕ್ಕೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಭಾನುವಾರ ರಾತ್ರಿ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ 2484 ಲೀಟರ್ ಗೋವಾ ನಿರ್ಮಿತ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಮಂಜೇಶ್ವರ ಅಬಕಾರಿ ಚೆಕ್‍ಪೋಸ್ಟ್‍ನಲ್ಲಿ ಅಬಕಾರಿ ಇನ್ಸ್‍ಪೆಕ್ಟರ್ ಆರ್ ರಿನೋಶ್ ಮತ್ತು ಅವರ ತಂಡ ಮದ್ಯ ಸಾಗಾಟವನ್ನು ಪತ್ತೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕದ ಕಾರವಾರ ಬಜಾರ್ ರಸ್ತೆಯ ನಿವಾಸಿ ರಾಧಾಕೃಷ್ಣ ಎಸ್. ಕಾಮತ್(59) ಬಂಧಿತ ಆರೋಪಿ. ಅವರ ಕೈಯಲ್ಲಿದ್ದ 9000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಮದ್ಯ ಸಾಗಣೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ಮೂರು ದಿನಗಳಿಂದ ಚೆಕ್ ಪೋಸ್ಟ್ ನಲ್ಲಿ ವ್ಯಾಪಕ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಇದೇ ವೇಳೆ ಭಾನುವಾರ ರಾತ್ರಿ ಕರ್ನಾಟಕ ನೋಂದಣಿಯ ಸರಕು ಸಾಗಣೆ ದೋಸ್ತ್ ವ್ಯಾನ್ ತಡೆದು ಚಾಲಕನನ್ನು ವಿಚಾರಣೆಗೊಳಪಡಿಸಲಾಗಿದೆ. ವ್ಯತಿರಿಕ್ತ ಹೇಳಿಕೆ ನೀಡಿದ ಬಳಿಕ ಅಬಕಾರಿ ಇಲಾಖೆ ವಾಹನವನ್ನು ತೆರೆದು ತಪಾಸಣೆ ನಡೆಸಿತು.
ಸರಕು ಸಾಗಣೆ ವಾಹನದ ಹಿಂಬದಿ ಗೋಣಿಚೀಲ ಮತ್ತು ಇತರ ಚೀಲಗಳಿಂದ ಮುಚ್ಚಲಾಗಿತ್ತು. ಬಳಿಕ ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಗೋಣಿಚೀಲದಲ್ಲಿ ಸಾರಾಯಿ ಇಟ್ಟಿರುವುದು ಪತ್ತೆಯಾಗಿದೆ. 750 ಎಂಎಲ್ ನ 720 ಬಾಟಲಿಗಳಲ್ಲಿ 540 ಲೀಟರ್, 180 ಎಂಎಲ್ ನ 10800 ಬಾಟಲಿಗಳಲ್ಲಿ 1944 ಲೀಟರ್ ಹಾಗೂ ಒಟ್ಟು 2484 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ.
ತಪಾಸಣೆಯಲ್ಲಿ ಅಧಿಕಾರಿಗಳಾದ ಸಜೀವ್ ವಿ, ಸಾಬು ಕೆ, ಸಿವಿಲ್ ಅಬಕಾರಿ ಅಧಿಕಾರಿಗಳಾದ ನಿಶಾದ್ ಪಿ, ಮಂಜುನಾಥನ್ ವಿ, ದಿನೂಪ್ ಕೆ, ಅಖಿಲೇಶ್ ಎಂಎಂ ಮತ್ತು ಶ್ಯಾಮ್‍ಜಿತ್ ಎಂ ಭಾಗವಹಿಸಿದ್ದರು.