ಕಾಸರಗೋಡು: ಆರೋಗ್ಯದ ಜೊತೆಗೆ ರುಚಿಯನ್ನು ಬಡಿಸುವ ಕುಟುಂಬಶ್ರೀ ಜಿಲ್ಲಾ ಮಿಷನ್ 'ಅಮೃತ ಕರ್ಕಾಟಕ' ಹೆಸರಲ್ಲಿ ಕರ್ಕಾಟಕ ಗಂಜಿ ಉತ್ಸವ ಆರಂಭಿಸಿದೆ. ಉತ್ಸವದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಬಂದರು ಪ್ರಾಚ್ಯವಸ್ತುಸಂಗ್ರಹಾಲಯ ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ಸೋಮವಾರ ನೆರವೇರಿಸಿದರು.
ರೋಗ ರುಜಿನಗಳನ್ನು ದೂರೀಕರಿಸಲು ಹಲವು ವಿಧದ ಆಹಾರವಸ್ತುಗಳು ನಮ್ಮ ಪರಿಸರದಲ್ಲೇ ಲಭ್ಯವಿದ್ದರೂ, ಇಂತಹ ಔಷಧೀಯ ಗುಣವುಳ್ಳ ಸೊಪ್ಪು, ಬೇರು, ಗಡ್ಡೆಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲದಾಗಿದೆ. ಕರ್ಕಾಟಕ ಮಾಸದಲ್ಲಿ ಈ ರೀತಿಯ ಆಹಾರ ಸೇವಿಸುವುದು ಆರೋಗ್ಯ ರಕ್ಷಣೆಗೆ ಪ್ರಯೋಜನವಾಗಲಿದೆ. ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಉತ್ಸವಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಆಹಾರ ಪದ್ಧತಿಯನ್ನು ಉತ್ತೇಜಿಸಲು ಮತ್ತು ಆಹಾರ ಸಂಬಂಧಿತ ಕಾಯಿಲೆಗಳ ವಿರುದ್ಧ ಹೋರಾಡಲು ಕರ್ಕಾಟಕ ಗಂಜಿ ಉತ್ಸವ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮುಖ್ಯ ಅತಿಥಿಯಾಗಿದ್ದರು. ಆಗಸ್ಟ್ 4 ರವರೆಗೆ ಕಾಸರಗೋಡು ಸಿವಿಲ್‍ಸ್ಟೇಶನ್ ವಠಾರದ ಜಿಲ್ಲಾಧಿಕಾರಿ ಕಚೇರಿ ಸನಿಹ ಉತ್ಸವ ಆಯೋಜಿಸಲಾಗಿದೆ. ಕಾಸರಗೋಡು ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಆರನೇ ಬಾರಿಗೆ ಕರ್ಕಾಟಕ ಗಂಜಿ ಉತ್ಸವ ಆಯೋಜಿಸುತ್ತಿದ್ದು, ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುವ ಉದ್ದೇಶದಿಂದ ಉತ್ಸವ ಆಯೋಜಿಸಲಾಗಿದೆ.
ಆಯುರ್ವೇದ ನಿಯಮಗಳ ಪ್ರಕಾರ, ಔಷಧ ಅಥವಾ ಔಷಧೀಯ ಗಂಜಿ ತಯಾರಿಸಲಗುತ್ತದೆ. ಮೆಂತೆ ಗಂಜಿ, ಜೀರಿಗೆ ಗಂಜಿ, ಹಾಲು ಗಂಜಿ, ತುಪ್ಪದ ಗಂಜಿ ಜತೆಗೆ ವಿವಿಧ ಪಾಯಸವನ್ನೂ ತಯಾರಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಎ.ಡಿ.ಎಂ.ಕೆ. ನವೀನ್ ಬಾಬು, ಡಿಎಫ್‍ಒ ಪಿ.ಧನೀಶ್ ಕುಮಾರ್, ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ಕುಟುಂಬಶ್ರೀ ಎಡಿಎಂಸಿ ಸಿಎಚ್.ಇಕ್ಬಾಲ್ ಮತ್ತು ಜಿಲ್ಲಾ ಕಾರ್ಯಕ್ರಮ-ಮಾರುಕಟ್ಟೆ ವ್ಯವಸ್ಥಾಪಕ ತತಿಲೇಶ್ ತಂಬಾನ್ ಉಪಸ್ಥಿತರಿದ್ದರು.