ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು ಬದಿಯಡ್ಕ ವಲಯದ ವಿದ್ಯಾಗಿರಿ ಪಂಚಮಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮವನ್ನು ವಿದ್ಯಾಗಿರಿ ವಿವೇಕಾನಂದ ಫ್ರೆಂಡ್ಸ್ ಕ್ಲಬ್ ನಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಷ್ಣುಮೂರ್ತಿ ತಂಡದ ಸದಸ್ಯೆ ಹೇಮಲತಾ ವಹಿಸಿದ್ದರು. ಮಜಕ್ಕಾರು ಮುತ್ತುಜಿ ರಾವ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಿರಿಧಾನ್ಯಗಳ ಪರಿಚಯ ಮಾಡಿ ಬಳಕೆ ಮತ್ತು ಸದುಪಯೋಗದ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಯೋಗೀಶ್ವರಿಯವರು ಸಿರಿಧಾನ್ಯಗಳ ಅಡುಗೆ ತಯಾರಿ ಬಗ್ಗೆ ಮಾಹಿತಿ ನೀಡಿದರು.
ಕಾಸರಗೋಡು ತಾಲೂಕು ಯೋಜನಾಧಿಕಾರಿ ಮುಕೇಶ್ ಅತಿಥಿಗಳಾಗಿ ಉಪಸ್ಥಿತರಿದ್ದು ಸಿರಿಧಾನ್ಯದ ಉಪಯೋಗ, ಯೌಟ್ಯೂಬ್ ಚಾನೆಲ್ ಬಳಕೆ ಮತ್ತು ಆಟಿ ತಿಂಗಳ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಲಯ ಮೇಲ್ವಿಚಾರಕ ದಿನೇಶ್, ಒಕ್ಕೂಟದ ಅಧ್ಯಕ್ಷ ತಾರಾನಾಥ ಶೆಟ್ಟಿ, ಶೌರ್ಯ ಘಟಕದ ಮಾಸ್ಟರ್ ಜಗನ್ನಾಥ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ, ಒಕ್ಕೂಟದ ಪದಾಧಿಕಾರಿಗಳು ಮತ್ತು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಆಟಿ ತಿಂಗಳ 26 ವಿಶೇಷ ತಿಂಡಿಗಳು ಮತ್ತು ಸಿರಿಧಾನ್ಯದಿಂದ ತಯಾರಿಸಿದ ತಿಂಡಿಗಳನ್ನು ಈ ಸಂದರ್ಭ ಹಂಚಲಾಯಿತು.