ಅಗರ್ತಲಾ : ತ್ರಿಪುರಾ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿಯುಂಟುಮಾಡಿದ ಐವರು ಶಾಸಕರನ್ನು ಶುಕ್ರವಾರ ಅಮಾನತು ಮಾಡಲಾಯಿತು. ಇದರ ಬೆನ್ನಲ್ಲೇ ವಿರೋಧ ಪಕ್ಷಗಳ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಅಗರ್ತಲಾ : ತ್ರಿಪುರಾ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿಯುಂಟುಮಾಡಿದ ಐವರು ಶಾಸಕರನ್ನು ಶುಕ್ರವಾರ ಅಮಾನತು ಮಾಡಲಾಯಿತು. ಇದರ ಬೆನ್ನಲ್ಲೇ ವಿರೋಧ ಪಕ್ಷಗಳ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಸಿಪಿಎಂ ಶಾಸಕ ನಯನ್ ಸರ್ಕಾರ್, ಕಾಂಗ್ರೆಸ್‌ನ ಸುದೀಪ್ ರಾಯ್ ಬರ್ಮನ್, ಟಿಪ್ರ ಮೊಥಾ ಪಕ್ಷದ ಶಾಸಕರಾದ ಋಷಕೇತು ದೇವವರ್ಮಾ, ನಂದಿತಾ ರೆಯಾಂಗ್ ಮತ್ತು ರಂಜಿತ್ ದೇವವರ್ಮಾ ಅವರನ್ನು ವಿಧಾನಸಭೆಯ ಸ್ಪೀಕರ್ ವಿಶ್ವಬಂಧು ಸೇನ್ ಅವರು ಒಂದು ದಿನದ ಮಟ್ಟಿಗೆ ಕಲಾಪದಿಂದ ಅಮಾನತು ಮಾಡಿದರು.
ಕಳೆದ ಮಾರ್ಚ್‌ನಲ್ಲಿ ನಡೆದ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಅಶ್ಲೀಲ ವಿಡಿಯೊ ನೋಡಿದ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಜಬಾಬ್ ಲಾಲ್ ನಾಥ್ ಅವರ ಅನುಚಿತ ವರ್ತನೆ ಕುರಿತು ಚರ್ಚಿಸುವಂತೆ ಟಿಪ್ರ ಮೊಥಾ ಶಾಸಕ ಅನಿಮೇಶ್ ದೇವವರ್ಮಾ ಅವರು ಪಟ್ಟು ಹಿಡಿದರು. ಈ ವಿಷಯವಾಗಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವಂತೆ ಕೋರಿದರು.
ಆದರೆ ಸ್ಪೀಕರ್ ಇದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಸಿಟ್ಟಾದ ಟಿಪ್ರ ಮೊಥಾ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಸಿಪಿಎಂ ಮತ್ತು ಕಾಂಗ್ರೆಸ್ ಸದಸ್ಯರು ಇವರನ್ನು ಬೆಂಬಲಿಸಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ನಂತರ ಸ್ಪೀಕರ್ ಕಲಾಪಕ್ಕೆ ಅಡ್ಡಿ ಮಾಡಿದ ಐವರು ಶಾಸಕರನ್ನು ಅಮಾನತು ಮಾಡಿದರು. ಸ್ಪೀಕರ್ ನಿರ್ಧಾರ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರಗೆ ಪ್ರತಿಭಟನೆ ನಡೆಸಿದರು.