ನವದೆಹಲಿ: ಮಣಿಪುರದ ಹಿಂಸಾಚಾರ ಮತ್ತು ಮೇ 4ರಂದು ನಡೆದ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಕೃತ್ಯ ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. 'ಮಣಿಪುರದಲ್ಲಿ ಮನುಷ್ಯತ್ವ ಎನ್ನುವುದು ಸತ್ತು ಹೋಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಖರ್ಗೆ, 'ದೇಶದ 'ಪ್ರಜಾಪ್ರಭುತ್ವ'ವನ್ನು ಮೋದಿ ನೇತೃತ್ವದ ಸರ್ಕಾರ 'ದೊಂಬಿ ಪ್ರಭುತ್ವ' ಮಾಡಿದೆ. ಮೋದಿಯವರೆ.... ನಿಮ್ಮ ಮೌನವನ್ನು ಭಾರತ ಎಂದಿಗೂ ಕ್ಷಮಿಸುವುದಿಲ್ಲ' ಎಂದು ಬರೆದುಕೊಂಡಿದ್ದಾರೆ.
'ನಿಮ್ಮ ಸರ್ಕಾರಕ್ಕೆ ಸ್ವಲ್ಪ ಆತ್ಮಸಾಕ್ಷಿ, ನಾಚಿಕೆ ಏನಾದರೂ ಉಳಿದಿದ್ದರೆ ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಮಾತನಾಡಿ. ಇತರರನ್ನು ದೂಷಿಸದೆ ಮಣಿಪುರದಲ್ಲಿ ಏನಾಗಿದೆ ಎಂಬುವುದನ್ನು ನೇರವಾಗಿ ತಿಳಿಸಿ' ಎಂದು ಒತ್ತಾಯಿಸಿದ್ದಾರೆ.
'ನೀವು(ಪ್ರಧಾನಿ ಮೋದಿ) ನಿಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ತ್ಯಜಿಸಿದ್ದೀರಿ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಾವು ಮಣಿಪುರದ ಜನರೊಂದಿಗೆ ನಿಲ್ಲುತ್ತೇವೆ' ಎಂದು ಹೇಳಿದ್ದಾರೆ.
ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಕೃತ್ಯ ಖಂಡಿಸಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಸ್ಟಾಲಿನ್ ಸೇರಿದಂತೆ ಹಲವು ವಿಪಕ್ಷ ನಾಯಕರು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೌನವನ್ನು ಪ್ರಶ್ನಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರದಿಂದ ಆರಂಭವಾಗಲಿದೆ. ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚಿಸಲು I.N.D.I.A ಮೈತ್ರಿಕೂಟ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮಣಿಪುರ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ತಯಾರಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.