ನವದೆಹಲಿ: ಮಣಿಪುರ ಜನಾಂಗೀಯ ಸಂಘರ್ಷದ ಕುರಿತು ಐರೋಪ್ಯ ಒಕ್ಕೂಟದ ಸಂಸತ್‌ನಲ್ಲಿ ಕೈಗೊಂಡಿರುವ ನಿರ್ಣಯದ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಾಕ್ಸಮರದಲ್ಲಿ ತೊಡಗಿದ್ದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ಮತ್ತೊಮ್ಮೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ತಮಿಳುನಾಡಿನ ಊಟಿಯಲ್ಲಿ ಮೂರು ದಿನಗಳ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಸಭೆಯ ಕೊನೆಯಲ್ಲಿ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಆರ್‌ಎಸ್‌ಎಸ್ 'ಸಂತ್ರಸ್ತರಿಗೆ ಪರಿಹಾರ ಪ್ರಯತ್ನಗಳನ್ನು ವಿಸ್ತರಿಸುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ, ಶಾಶ್ವತ ಶಾಂತಿ ಸ್ಥಾಪಿಸಲು ಮತ್ತು ಪುನರ್‌ವಸತಿ ಕಲ್ಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು' ಎಂದು ಹೇಳಿದೆ.
'ಸಂಘರ್ಷ ಪೀಡಿತ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮತ್ತು ಪರಸ್ಪರ ಸಾಮರಸ್ಯ ಮೂಡಿಸಲು ಸಮಾಜದ ಎಲ್ಲ ವರ್ಗಗಳು ತಮ್ಮ ಕೊಡುಗೆ ನೀಡಬೇಕು ಎಂದೂ ಒತ್ತಾಯಿಸಲಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮತ್ತು ಸಂಘಟನೆಯ ಇನ್ನಿತರ ಉನ್ನತ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈಶಾನ್ಯ ರಾಜ್ಯದ ಜನಾಂಗೀಯ ಹಿಂಸಾಚಾರದ ಬಗ್ಗೆ ಆರ್‌ಎಸ್‌ಎಸ್ ಕಳವಳ ವ್ಯಕ್ತಪಡಿಸಿರುವುದು ತಿಂಗಳಲ್ಲಿ ಇದು ಎರಡನೇ ಬಾರಿ. ಜೂನ್‌ನಲ್ಲಿ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ, ಶಾಂತಿ ಮರುಸ್ಥಾಪನೆಗಾಗಿ, ವಿಶ್ವಾಸ ಕೊರತೆಯನ್ನು ಮಾತುಕತೆಯ ಮೂಲಕ ನೀಗಿಸಲು ಎರಡೂ ಕಡೆಯವರನ್ನು ಹೊಸಬಾಳೆ ಅವರು ಒತ್ತಾಯಿಸಿದ್ದರು.
ಆರ್‌ಎಸ್‌ಎಸ್ ಅಂಗಸಂಸ್ಥೆ ಬುಡಕಟ್ಟು ಕಲ್ಯಾಣದ 'ವನವಾಸಿ ಕಲ್ಯಾಣ ಆಶ್ರಮ'ದ ಆಂತರಿಕ ಚರ್ಚೆಗಳಲ್ಲಿ, ಮಣಿಪುರದ ಬುಡಕಟ್ಟು ಸಮುದಾಯಗಳ ತೀವ್ರ ಪ್ರತಿರೋಧಕ್ಕೆ ಕಾರಣವಾದ ಮತ್ತು ಪ್ರಸ್ತುತ ಸಂಘರ್ಷಕ್ಕೆ ಕಾರಣವಾದ ಬೇಡಿಕೆಯು ಮೈತೇಯಿ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವುದರಿಂದ ಉದ್ಭವಿಸುವ ಸಮಸ್ಯೆಗಳನ್ನು ಪ್ರಸ್ತಾಪಿಸಲಾಯಿತು.