ಚೆನ್ನೈ: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮಿತ್ರ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಬುಧವಾರ ಏಕರೂಪ ನಾಗರಿಕ ಸಂಹಿತೆ ಜಾರಿ ವಿರುದ್ಧದ ತನ್ನ ನಿಲುವನ್ನು ಪುನರುಚ್ಚರಿಸಿದೆ.
ಬಿಜೆಪಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾಗಿದ್ದು, ಈ ಬಗ್ಗೆ ತಮ್ಮ ಪಕ್ಷದ ನಿಲುವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪಳನಿಸ್ವಾಮಿ, 2019 ರ ಲೋಕಸಭೆ ಚುನಾವಣೆಗೆ ಬಿಡುಗಡೆ ಮಾಡಲಾದ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ನಿಲುವು ಸ್ಪಷ್ಟಪಡಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.
ಚೆನ್ನೈನಲ್ಲಿ ನಡೆದ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆಯ ನಂತರ ಮಾತನಾಡಿದ ಮಾಜಿ ಸಿಎಂ, ನಮ್ಮ ಪ್ರಣಾಳಿಕೆಯನ್ನು ಓದಿ, ನಾವು ಅದರಲ್ಲಿ ಸ್ಪಷ್ಟವಾಗಿ ನಮೂದಿಸಿದ್ದೇವೆ ಎಂದರು.
2019 ರ ಪ್ರಣಾಳಿಕೆಯಲ್ಲಿ, 'ಸೆಕ್ಯುಲರಿಸಂ' ವಿಷಯದ ಅಡಿಯಲ್ಲಿ, "ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಸಂವಿಧಾನಕ್ಕೆ ಯಾವುದೇ ತಿದ್ದುಪಡಿಗಳನ್ನು ತರದಂತೆ ಕೇಂದ್ರ ಸರ್ಕಾರವನ್ನು ಎಐಎಡಿಎಂಕೆ ಒತ್ತಾಯಿಸುತ್ತದೆ" ಎಂದು ಹೇಳಲಾಗಿದೆ.