ಟೋಕಿಯೊ: ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಮರಿಯಾನೋ ಗ್ರಾಸ್ಸಿ ಅವರು ಮುಂದಿನ ವಾರ ಜಪಾನ್‌ಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಫುಕುಶಿಮಾ ಪರಮಾಣು ಸ್ಥಾವರದ ಸಂಸ್ಕರಿಸಿದ ವಿಕಿರಣಶೀಲ ತ್ಯಾಜ್ಯನೀರನ್ನು ಫೆಸಿಫಿಕ್ ಮಹಾಸಾಗರಕ್ಕೆ ಬಿಡುಗಡೆ ಮಾಡುವ ಅಂತಿಮ ಸಿದ್ಥತೆ ವೀಕ್ಷಿಸಲಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆದರೆ, ಫೆಸಿಫಿಕ್ ಮಹಾಸಾಗರಕ್ಕೆ ತ್ಯಾಜ್ಯನೀರು ಬಿಡುಗಡೆಗೆ ಸ್ಥಳೀಯ ಮೀನುಗಾರಿಕಾ ಗುಂಪುಗಳು ಮತ್ತು ನೆರೆಯ ದಕ್ಷಿಣ ಕೊರಿಯಾ, ಚೀನಾ ಮತ್ತು ಫೆಸಿಫಿಕ್ ದ್ವೀಪದ ಕೆಲ ರಾಷ್ಟ್ರಗಳು ಬಲವಾಗಿ ವಿರೋಧಿಸಿವೆ.
ಜುಲೈ 4ರಿಂದ 7ರವರೆಗೆ ಗ್ರಾಸ್ಸಿ ಅವರು ಜಪಾನ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ಪ್ರಧಾನಿ ಫುಮಿಯೊ ಕಿಶಿಡಾ, ಕೈಗಾರಿಕಾ ಸಚಿವ ಯಸುತೋಶಿ ನಿಶಿಮುರಾ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ ಎಂದು ಜಪಾನ್‌ನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.
ತ್ಯಾಜ್ಯನೀರು ಬಿಡುಗಡೆ ವಿರೋಧಿಸಿ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಪರಿಸರ ಕಾರ್ಯಕರ್ತರು ಶುಕ್ರವಾರ ಜಪಾನ್ ರಾಯಭಾರ ಕಚೇರಿಯ ಹೊರಗೆ ವಿರುದ್ಧ ಪ್ರತಿಭಟನೆ ನಡೆಸಿದರು.