ಇಂಫಾಲ: ಮಹಿಳೆಯರ ಬೆತ್ತಲೆ ಮೆರವಣಿಗೆ ವಿಚಾರವಾಗಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಮಣಿಪುರದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ವ್ಯಕ್ತಿಯ ತಲೆ ಕತ್ತರಿಸಿ ಕೋಲಿಗೆ ನೇತು ಹಾಕಿ ಘಟನೆ ವರದಿಯಾಗಿದೆ.
ಬಿಷ್ಣುಪುರ ಜಿಲ್ಲೆಯ ವಸತಿ ಪ್ರದೇಶ (residential area)ದಲ್ಲಿ ಈ ಕೃತ್ಯ ನಡೆದಿದ್ದು, ಕುಕಿ ಸಮುದಾಯದ ಡೆವಿಡ್ ಥೀಕ್, ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಂತರ ಆತನ ತಲೆಯನ್ನು ಬಿದಿರು ಕೋಲಿಗೆ ಸಿಕ್ಕಿಸಿ ವಿಕೃತಿ ಮೆರೆದಿದ್ದಾರೆ. ಜುಲೈ 2 ರಂದು ಬೆಳಗ್ಗೆ 12 ಗಂಟೆಗೆ ನಡೆದ ಘರ್ಷಣೆಯಲ್ಲಿ ಡೆವಿಡ್ರನ್ನು ಕೊಲೆ ಮಾಡಲಾಗಿದೆ. ಈ ಸಂಘರ್ಷದಲ್ಲಿ ಒಟ್ಟು ಮೂವರು ಪ್ರಾಣಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ದೇಶದಾದ್ಯಂತ ಸಂಚಲನ ಮೂಡಿಸಿದೆ.
ಬಂಧಿತರ ಸಂಖ್ಯೆ ಐದಕ್ಕೇರಿಕೆ
ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಣಿಪುರ ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದಾರೆ. ಅದರಲ್ಲೂ ಮುಖ್ಯ ಆರೋಪಿಯ ಮನೆಗೆ ಬೆಂಕಿಯಿಟ್ಟು ಭಸ್ಮಮಾಡಲಾಗಿದೆ. ಮಣಿಪುರದಲ್ಲಿ ಮೀಸಲಾತಿ ವಿಚಾರ ಸಂಬಂಧ ಕುಕಿ ಮತ್ತು ಮೇಟಿ ಸಮುದಾಯದ ಮಧ್ಯೆ ಸಂಘರ್ಷ ನಡೆಯುತ್ತಿದೆ. ಇದುವರೆಗೆ 160ಕ್ಕೂ ಹೆಚ್ಚು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.