ಚಂಪಾರಣ್: ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ನೇಪಾಳದ ಮೂಲಕ ಭಾರತದ ಭೂಪ್ರದೇಶಕ್ಕೆ ನುಸುಳಿರುವುದನ್ನು ಗಮನಿಸಿದ ವಲಸೆ ಅಧಿಕಾರಿಗಳು ಬಿಹಾರದಲ್ಲಿ ಇಬ್ಬರು ಚೀನೀ ಪ್ರಜೆಗಳನ್ನು ಬಂಧಿಸಿದ್ದಾರೆ. ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸಾಲ್ ಗಡಿ ಹೊರಠಾಣೆಯಲ್ಲಿ ಶನಿವಾರ ರಾತ್ರಿ ಅವರನ್ನು ಬಂಧಿಸಲಾಯಿತು ಎಂದು ಸಹಾಯಕ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿ ಎಸ್‌ಕೆ ಸಿಂಗ್ ತಿಳಿಸಿದ್ದಾರೆ.
ವಿಚಾರಣೆ ವೇಳೆ ವಿದೇಶಿಗರು ತಮ್ಮ ಹೆಸರು ಝಾವೋ ಜಿಂಗ್ ಮತ್ತು ಫೂ ಕಾಂಗ್ ಎಂದು ಹೇಳಿದ್ದು, ಅವರಿಬ್ಬರೂ ಚೀನಾದ ಜಾಕ್ಸಿಂಗ್ ಪ್ರಾಂತ್ಯದಿಂದ ಬಂದವರಾಗಿದ್ದಾರೆ. ಅವರ ಬಳಿ ಯಾವುದೇ ಮಾನ್ಯವಾದ ಪ್ರಯಾಣ ದಾಖಲೆಗಳು ಇರಲಿಲ್ಲ.
ಹಿಂದಿನ ರಾತ್ರಿ ಅವರು ತಂಗಿದ್ದ ಹೋಟೆಲ್‌ನಲ್ಲಿ ತಮ್ಮ ಪಾಸ್‌ಪೋರ್ಟ್‌ಗಳನ್ನು ಬಿಟ್ಟು ಬಂದಿರುವುದಾಗಿ ಹೇಳಿರುವುದಾಗಿ ಸಿಂಗ್ ಹೇಳಿದರು.
ದಾಖಲೆಗಳ ಪ್ರಕಾರ ಜುಲೈ 2 ರಂದು ಸಹ ಈ ಚೀನಾ ಪ್ರಜೆಗಳು ಭಾರತೀಯ ಭೂ ಪ್ರದೇಶಕ್ಕೆ ನುಸುಳಲು ಪ್ರಯತ್ನಿಸಿದರು. ಆದರೆ, ಪ್ರವೇಶ ನಿರಾಕರಿಸಿ ಹಿಂದೆ ಕಳುಹಿಸಲಾಗಿತ್ತು. ಆದಾಗ್ಯೂ, "ಅವರು ಪದೇ ಪದೇ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಅನುಮಾನಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಹೆಚ್ಚಿನ ತನಿಖೆ ಮತ್ತು ಕ್ರಮಕ್ಕಾಗಿ ಅವರನ್ನು ಬಂಧಿಸಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.