ಕೊಲ್ಕತ್ತ: ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆಯಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಭಾರಿ ಗೆಲುವು ದಾಖಲಿಸಿದೆ. ಬುಧವಾರ ಮಧ್ಯಾಹ್ನ 1 ಗಂಟೆಯವರೆಗೆ ಘೋಷಣೆಯಾದ ಫಲಿತಾಂಶದಲ್ಲಿ ಟಿಎಂಸಿ ಪಾರಮ್ಯ ಮೆರೆದಿದೆ.
ಗ್ರಾಮ ಪಂಚಾಯಿತಿ
ರಾಜ್ಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 63,229 ಗ್ರಾಮ ಪಂಚಾಯಿತಿ ಸೀಟುಗಳ ಪೈಕಿ ಟಿಎಂಸಿ 34,694ರಲ್ಲಿ ಗೆಲುವು ಸಾಧಿಸಿದ್ದು, 677 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಸಮೀಪದ ಪ್ರತಿಸ್ಪರ್ಧಿ ಬಿಜೆಪಿ 9,656 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 166 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. 2,926 ಕ್ಷೇತ್ರಗಳಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದು, 86 ಸೀಟುಗಳಲ್ಲಿ ಮುನ್ನಡೆಯಲ್ಲಿದ್ದಾರೆ.
2,528 ಸೀಟುಗಳಲ್ಲಿ ಗೆದ್ದಿರುವ ಕಾಂಗ್ರೆಸ್ 65 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಪಂಚಾಯಿತಿ ಸಮಿತಿ
9,728 ಪಂಚಾಯಿತಿ ಸಮಿತಿ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿಎಂಸಿ 6,335 ಸೀಟುಗಳನ್ನು ಗೆದ್ದುಕೊಂಡಿದೆ. 214 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
973 ಸೀಟುಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, 48 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
173 ಕ್ಷೇತ್ರಗಳು ಸಿಪಿಐ(ಎಂ) ವಶವಾದರೆ, 258 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಎರಡೂ ಪಕ್ಷಗಳು ಕ್ರಮವಾಗಿ 16 ಹಾಗೂ 7 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿವೆ.
ಜಿಲ್ಲಾ ಪರಿಷತ್
928 ಜಿಲ್ಲಾ ಪರಿಷತ್ ಕ್ಷೇತ್ರಗಳ ಪೈಕಿ ಈವರೆಗೂ ಟಿಎಂಸಿ 635 ಸೀಟುಗಳನ್ನು ತನ್ನದಾಗಿಸಿಕೊಂಡಿದೆ. 164ರಲ್ಲಿ ಮುನ್ನಡೆಯಲ್ಲಿದೆ. 21 ಸೀಟುಗಳನ್ನು ಗೆದ್ದಿರುವ ಬಿಜೆಪಿ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 2 ಕ್ಷೇತ್ರ ಸಿಪಿಐ(ಎಂ) ಪಾಲಾದರೆ 6 ಸೀಟುಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಉಭಯ ಪಕ್ಷಗಳು ಕ್ರಮವಾಗಿ 1 ಹಾಗೂ 6 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.
ಮತ ಎಣಿಕೆ ವೇಳೆಯೂ ಹಿಂಸಾಚಾರ
ಚುನಾವಣೆ ಪ್ರಚಾರ, ಮತದಾನ ದಿನದಂದು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆ ದಿನವೂ ಹಿಂಸಾಚಾರ ನಡೆದಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಭಂಗೋರ್‌ನಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್‌ನ ಇಬ್ಬರು ಕಾರ್ಯಕರ್ತರು ಸೇರಿದಂತೆ ಒಟ್ಟು ಮೂರು ಮಂದಿಯ ಹತ್ಯೆಯಾಗಿದೆ. ಹಲವು ಮಂದಿ ಗಾಯಗೊಂಡಿದ್ದಾರೆ. ಮತ ಎಣಿಕೆ ಕೇಂದ್ರದ ಹೊರಗಡೆ ನಡೆದ ಘರ್ಷಣೆಯಲ್ಲಿ ಇದು ಸಂಭವಿಸಿದೆ.