ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ದಲ್ಲಿ ಖಾಲಿ ಇರುವ ಮೂರು ಹುದ್ದೆಗಳನ್ನು ಭರ್ತಿ ಮಾಡದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಎನ್‌ಎಚ್‌ಆರ್‌ಸಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ, ಈ ಸಂಬಂಧ ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.
ಸೆಪ್ಟೆಂಬರ್ 11, 2021, ಏಪ್ರಿಲ್ 4, 2022 ಮತ್ತು ಜನವರಿ 4, 2023 ರಿಂದ ಈ ಮೂರು ಹುದ್ದೆಗಳು ಖಾಲಿ ಇರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಮೂರು ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ವಕೀಲ ರಾಧಾಕಾಂತ ತ್ರಿಪಾಠಿ ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಎನ್‌ಎಚ್‌ಆರ್‌ಸಿಯಲ್ಲಿ ಮೂವರು ಸದಸ್ಯರನ್ನು ನೇಮಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಇದರಿಂದ ಆಯೋಗದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತಿದೆ. ಇದು ಕಾನೂನು ಮತ್ತು ನ್ಯಾಯದ ಆಡಳಿತದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.