ಇಂಫಾಲ್ : ಮಣಿಪುರದಲ್ಲಿ ಹಿಂಸಾಚಾರವು ತನ್ನ ಕಬಂಧಬಾಹು ವಿಸ್ತರಿಸುತ್ತಿರುವ ಹಿಂದೆ ಸುಳ್ಳು ಸುದ್ದಿಗಳು ಹಾಗೂ ಪ್ರಚೋದನಕಾರಿ ಸುದ್ದಿಗಳ ಪಾಲು ದೊಡ್ಡದಿದೆ ಎಂದು ಸಂಘರ್ಷ ಪೀಡಿತ ನೆಲದಲ್ಲಿ ಶಾಂತಿ ಪುನರ್ ಸ್ಥಾಪನೆಗೆ ಶ್ರಮಿಸುತ್ತಿರುವ ರಕ್ಷಣಾ ಪಡೆಗಳ ಅಧಿಕಾರಿಗಳು ಹೇಳಿದ್ದಾರೆ.
ಸುಳ್ಳು ಸುದ್ದಿ ಎಂಬ ಪೆಡಂಭೂತದ ಹಾವಳಿಯಿಂದ ಸಂಘರ್ಷ ಉಲ್ಬಣಿಸಿರುವುದಕ್ಕೆ ಅವರು ಹಲವು ಘಟನೆಗಳನ್ನು ನಿದರ್ಶನವಾಗಿ ಉಲ್ಲೇಖಿಸಿದ್ದಾರೆ. ಮೇ 4ರಂದು ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಕೃತ್ಯ ನಡೆದಿದೆ. ಆದರೆ, ಈ ಬಗ್ಗೆ ಚುರಚಂದಪುರದಲ್ಲಿ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಯಿತು. ಇದು ಇಂಫಾಲ್ ಕಣಿವೆ ಪ್ರದೇಶದ ವ್ಯಾಪ್ತಿಯಲ್ಲಿ ಹರಿದಾಡಿದ್ದರಿಂದ ಹಿಂಸಾಚಾರ ಉಲ್ಬಣಕ್ಕೆ ಮೂಲ ಕಾರಣವಾಯಿತು ಎಂದು ವಿವರಿಸಿದ್ದಾರೆ.
ಆದರೆ, ಮಹಿಳೆಯರ ಹತ್ಯೆ ಸುದ್ದಿಯ ಬೆನ್ನುಹತ್ತಿದ ಪೊಲೀಸರು, ಇಂಫಾಲ್‌ನಲ್ಲಿ ಮಹಿಳೆಯೊಬ್ಬರ ಕೊಲೆಯಾಗಿರುವುದನ್ನು ಪತ್ತೆ ಹಚ್ಚಿದರು. ಆ ವೇಳೆಗಾಗಲೇ ಕಣಿವೆ ಪ್ರದೇಶದ ಜಿಲ್ಲೆಗಳಲ್ಲಿ ಸುಳ್ಳು ಸುದ್ದಿ ಹರಡಿದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿತು ಎಂದಿದ್ದಾರೆ.
ಇದಕ್ಕೆ ಪರಿಹಾರ ಹುಡುಕಲು ಹೊರಟ ಸರ್ಕಾರವು, ಕಾಳ್ಗಿಚ್ಚಿನಂತೆ ಹಬ್ಬುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಮೇ 3ರಂದು ರಾಜ್ಯದಾದ್ಯಂತ ಇಂಟರ್‌ನೆಟ್ ಸೇವೆ ಬಳಕೆಗೆ ನಿರ್ಬಂಧ ಹೇರಿತು. ಇದಕ್ಕೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ಆಕ್ಷೇಪವೂ ವ್ಯಕ್ತವಾಯಿತು. ಕೊನೆಗೆ, ಈ ವಿಷಯವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದು ಉಂಟು.
ಸ್ಥಳೀಯ ಪತ್ರಿಕೆಗಳು ಕೂಡ ಸುಳ್ಳು ಸುದ್ದಿಗಳು ಹಾಗೂ ಏಕಮುಖವಾಗಿ ಸುದ್ದಿ ಪ್ರಕಟಿಸುವುದರಲ್ಲಿ ಪೈಪೋಟಿಗೆ ಬಿದ್ದಿವೆ. ಇದು ಕೂಡ ಹಿಂಸಾಚಾರ ನಿಯಂತ್ರಣಕ್ಕೆ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಇದಕ್ಕೆ ಇತ್ತೀಚೆಗೆ ಸ್ಥಳೀಯ ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಂಡ ಸುಳ್ಳು ಸುದ್ದಿಯನ್ನು ಅವರು ನಿದರ್ಶನ ನೀಡುತ್ತಾರೆ.
'ಚಂದೇಲ್ ಜಿಲ್ಲೆಯ ಕ್ವಾಥಾ ಗ್ರಾಮದಲ್ಲಿರುವ ಅತಿದೊಡ್ಡ ಬುಡಕಟ್ಟು ಸಮುದಾಯದ ಮೇಲೆ ದಾಳಿ ನಡೆಸಲು ಬೇರೊಂದು ಬುಡಕಟ್ಟಿಗೆ ಸೇರಿದ ಶಸ್ತ್ರಸಜ್ಜಿತ ಪುರುಷರ ಗುಂಪೊಂದು ಯೋಜನೆ ರೂಪಿಸಿದೆ ಎಂದು ವರದಿ ಪ್ರಕಟಿಸಿತ್ತು. ಸ್ಥಳೀಯ ಪೊಲೀಸರು ಇದರ ಮಾಹಿತಿ ಮೇರೆಗೆ ಸ್ಥಳವನ್ನು ಜಾಲಾಡಿದಾಗ ಅದೊಂದು ಸುಳ್ಳು ಸುದ್ದಿ ಎಂಬುದು ಗೊತ್ತಾಯಿತು' ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಿರುವಂತೆ ಯಾವುದೇ ಹಳ್ಳಿಯನ್ನು ಧ್ವಂಸಗೊಳಿಸುವ ಸಂಚು ನಡೆದಿಲ್ಲ' ಎಂದು ಪೊಲೀಸರು ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಜೊತೆಗೆ, ಸೂಕ್ಷ್ಮ ವಿಚಾರಗಳ ಬಗ್ಗೆ ಸುದ್ದಿ ಪ್ರಕಟಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಪತ್ರಿಕೆಗಳಿಗೂ ಕೋರಿದ್ದಾರೆ.