ನವದೆಹಲಿ: ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿನ ಅತ್ಯುತ್ತಮ ವೆಬ್ ಸೀರೀಸ್ ಗಳಿಗೆ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್ಎಫ್ಐ) ನಲ್ಲಿ ಪ್ರಶಸ್ತಿ ನೀಡಲು ಮಾಹಿತಿ ಹಾಗೂ ಪ್ರಸಾರ ಇಲಾಖೆ (ಐ&ಬಿ) ನಿರ್ಧರಿಸಿದೆ.
ಈ ವರ್ಷದ ನವೆಂಬರ್ 20 ಹಾಗೂ 28 ರಂದು ಗೋವಾದಲ್ಲಿ ಐಎಫ್ಎಫ್ಐ ನಡೆಯಲಿದ್ದು, ಪ್ರಶಸ್ತಿಯನ್ನು ಮೊದಲ ಬಾರಿಗೆ ಕೊಡಮಾಡಲಾಗುತ್ತದೆ.
ಸಚಿವ ಅನುರಾಗ್ ಠಾಕೂರ್ ಹೊಸ ಪ್ರಶಸ್ತಿ ವಿಭಾಗವನ್ನು ಘೋಷಿಸಿದ್ದು, ಈ ವರ್ಷದಿಂದ ಮೊದಲುಗೊಂಡು ವಾರ್ಷಿಕವಾಗಿ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿನ ಒರಿಜಿನಲ್ ವೆಬ್ ಸೀರೀಸ್ ಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಕಲಾತ್ಮಕ ಅರ್ಹತೆ, ಕಥೆ ಹೇಳುವ ಶ್ರೇಷ್ಠತೆ, ತಾಂತ್ರಿಕ ಸಾಮರ್ಥ್ಯ ಹೊಂದಿರುವ ಅಸಾಧಾರಣ ವೆಬ್ ಸರಣಿಗೆ "ಅತ್ಯುತ್ತಮ ವೆಬ್ ಸರಣಿಯ ಪ್ರಶಸ್ತಿಯನ್ನು ಪ್ರಸ್ತುತಪಡಿಸಲು ಸಂತೋಷವಾಗಿದೆ ಎಂದು ಅನುರಾಗ್ ಠಾಕೂರ್ ಟ್ವೀಟ್ ಮಾಡಿ ಘೋಷಿಸಿದ್ದಾರೆ.
ಭಾರತವು ಅಸಾಧಾರಣ ಪ್ರತಿಭೆಗಳಿಂದ ತುಂಬಿದೆ; ಉದಯೋನ್ಮುಖ ಮತ್ತು ಮಹತ್ವಾಕಾಂಕ್ಷೆಯ ನವಭಾರತದ ಕಥೆಯನ್ನು ಹೇಳಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ - ಶತಕೋಟಿ ಕನಸುಗಳು ಮತ್ತು ಶತಕೋಟಿ ಹೇಳಿರದ ಕಥೆಗಳೊಂದಿಗೆ ಜಗತ್ತನ್ನು ಮುನ್ನಡೆಸಲು ಸಿದ್ಧವಾಗಿದೆ, ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ.
ಈ ಪ್ರಶಸ್ತಿಯು ಭಾರತದ ಒಟಿಟಿ ವಲಯದಲ್ಲಿ ಹೂಡಿಕೆಯ ಅವಕಾಶಗಳನ್ನು ಉತ್ತೇಜಿಸಲು ಮತ್ತು ಸೃಷ್ಟಿಸಲು, ಭಾರತೀಯ ಭಾಷೆಗಳಲ್ಲಿ ಕಂಟೆಂಟ್ ನ್ನು ಉತ್ತೇಜಿಸಲು, ಅಸಾಧಾರಣ ಪ್ರತಿಭೆಯನ್ನು ಗುರುತಿಸಲು ಮತ್ತು ಒಟಿಟಿ ಉದ್ಯಮದಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳೊಂದಿಗೆ ಠಾಕೂರ್ ಮಂಗಳವಾರ ಸಂವಾದ ನಡೆಸಿದರು ಮತ್ತು ಕಂಟೆಂಟ್ ರೆಗ್ಯುಲೇಷನ್, ಬಳಕೆದಾರರ ಅನುಭವ ಮತ್ತು ವಿಶೇಷ ಚೇತನರಿಗೆ ಪ್ರವೇಶವನ್ನು ಹೆಚ್ಚಿಸುವುದು ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ.