ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹೃದಯ ಭಾಗದಲ್ಲಿರುವ ಔರಂಗಜೇಬ್ ಲೇನ್ ಅನ್ನು ಡಾ. ಎಪಿಜೆ ಅಬ್ದುಲ್ ಕಲಾಂ ಲೇನ್ ಎಂದು ಮರುನಾಮಕರಣ ಮಾಡಲಾಗಿದೆ.
ನವದೆಹಲಿ ಮುನ್ಸಿಪಲ್ ಕೌನ್ಸಿಲ್(NDMC) ಸಿಬ್ಬಂದಿ ಗುರುವಾರ ದೆಹಲಿಯಲ್ಲಿ ಭಾರತದ 11ನೇ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಹೊಂದಿರುವ ಸೈನ್ ಬೋರ್ಡ್ ಅನ್ನು ಅನಾವರಣಗೊಳಿಸಿದರು.
ಮರುನಾಮಕರಣ ಮಾಡಲಾದ ಲೇನ್ ಮಧ್ಯ ದೆಹಲಿಯ ಪೃಥ್ವಿ ರಾಜ್ ರಸ್ತೆಯೊಂದಿಗೆ ಅಬ್ದುಲ್ ಕಲಾಂ ರಸ್ತೆಯನ್ನು ಸಂಪರ್ಕಿಸುತ್ತದೆ.
ಔರಂಗಜೇಬ್ ಲೇನ್’ ಅನ್ನು ಡಾ. ಎಪಿಜೆ ಅಬ್ದುಲ್ ಕಲಾಂ ಲೇನ್ ಎಂದು ಮರುನಾಮಕರಣ ಮಾಡಲು ಉಪ-ಕಲಂ(ಎ) ಪ್ರಕಾರ ಕೌನ್ಸಿಲ್‌ನ ಮುಂದೆ ಅಜೆಂಡಾ ಇರಿಸಲಾಗಿತ್ತು. ನವದೆಹಲಿ ಮುನ್ಸಿಪಲ್ ಆಕ್ಟ್, 1994ರ ಸೆಕ್ಷನ್ 231ರ ವಿಭಾಗ(1)ರ ಅಡಿ ಔರಂಗಜೇಬ್ ಲೇನ್ ಅನ್ನು ಡಾ. ಎಪಿಜೆ ಅಬ್ದುಲ್ ಕಲಾಂ ಲೇನ್ ಎಂದು ಮರುನಾಮಕರಣ ಮಾಡಲು ಕೌನ್ಸಿಲ್ ಅನುಮೋದಿಸಿದೆ ಎಂದು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.