ನವದೆಹಲಿ: ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ ಅವರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ತನ್ನ ಹೆಸರಾಂತ ಸನ್ಯಾಸಿಗಳಲ್ಲಿ ಒಬ್ಬರಾದ ಅಮೋಘ ಲೀಲಾ ದಾಸ್ ಅವರ ಮೇಲೆ ಇಸ್ಕಾನ್ ಒಂದು ತಿಂಗಳ ಮಟ್ಟಿಗೆ ನಿಷೇಧ ಹೇರಿದೆ.
ಅಮೋಘ ಲೀಲಾ ದಾಸ್ ಅವರು ಆಧ್ಯಾತ್ಮಿಕ ಸ್ಫೂರ್ತಿ ತುಂಬುವ ಭಾಷಣಕಾರರಾಗಿದ್ದು, ಅವರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಜನಪ್ರಿಯವಾಗಿವೆ. ಇತ್ತೀಚೆಗೆ ಅವರು ಪ್ರವಚನ ಒಂದನ್ನು ನೀಡುವ ವೇಳೆ, ಸ್ವಾಮಿ ವಿವೇಕಾನಂದ ಅವರು ಮೀನು ಆಹಾರ ಸೇವಿಸುತ್ತಿದ್ದುದ್ದನ್ನು ಪ್ರಶ್ನಿಸಿದ್ದರು. ಸದ್ಗುಣಶೀಲ ವ್ಯಕ್ತಿಯು ಯಾವುದೇ ಪ್ರಾಣಿಗೆ ಹಾನಿ ಉಂಟುಮಾಡುವಂತಹ ಯಾವುದನ್ನೂ ಸೇವಿಸುವುದಿಲ್ಲ ಎಂದು ಅವರು ಹೇಳಿದ್ದರು.
ಈ ಕುರಿತಾಗಿ ಇಸ್ಕಾನ್, ಮಂಗಳವಾರ (ಜು.11) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಮೋಘ ಲೀಲಾ ಪ್ರಭು ಅವರು ಸ್ವಾಮಿ ವಿವೇಕಾನಂದ ಮತ್ತು ಅವರ ಗುರುಗಳ ಬಗ್ಗೆ “ಆಕ್ಷೇಪಾರ್ಹ” ಹೇಳಿಕೆ ನೀಡಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ. ಆದ್ದರಿಂದ, ಅವರು ತಮ್ಮ ಟೀಕೆಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಒಂದು ತಿಂಗಳ ಕಾಲ ಸಾಮಾಜಿಕ ಜೀವನದಿಂದ ದೂರವಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸೇರಿಸಲಾಗಿದೆ.
ಅಮೋಘ ಲೀಲಾ ದಾಸ್ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ ವ್ಯಕ್ತಿ. ಧರ್ಮ ಮತ್ತು ಪ್ರೇರಣೆಯ ಕುರಿತಾದ ಅವರ ವೀಡಿಯೊಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾಮಾನ್ಯವಾಗಿ ಟ್ರೆಂಡ್ ಆಗುತ್ತವೆ.
ವೆಬ್‌ನಲ್ಲಿ ಅಮೋಘ ಲೀಲಾ ದಾಸ್ ಬಗ್ಗೆ ಬರಹ ರೂಪದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಯೂಟ್ಯೂಬ್‌ನಲ್ಲಿ ಅವರ ಕೆಲವು ವೀಡಿಯೊ ಸಂದರ್ಶನಗಳ ಪ್ರಕಾರ, ಅಮೋಘ್ ಲೀಲಾ ದಾಸ್ ಅವರು ಲಖನೋದ ಧಾರ್ಮಿಕ ಕುಟುಂಬದಲ್ಲಿ ಆಶಿಶ್ ಅರೋರಾ ಆಗಿ ಜನಿಸಿದರು ಎಂದು ಹೇಳಲಾಗುತ್ತದೆ.
ಸನ್ಯಾಸಿಯಾಗಿರುವ ಅಮೋಘ ಲೀಲಾ ದಾಸ್, ತಮ್ಮ ಪ್ರವಚನವೊಂದರಲ್ಲಿ, ಸ್ವಾಮಿ ವಿವೇಕಾನಂದರು ಮಾಡುತ್ತಿದ್ದ ಮೀನಿನ ಸೇವನೆಯನ್ನು ಪ್ರಶ್ನಿಸಿದ್ದು, ಸದ್ಗುಣಶೀಲ ವ್ಯಕ್ತಿಯು ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ ಎಂದು ಹೇಳಿದ್ದರು. ಅವರು ಸ್ವಾಮಿ ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರನ್ನೂ ಈ ಸಂದರ್ಭದಲ್ಲಿ ಕೆಣಕಿದ್ದರು.