ಗ್ವಾಲಿಯರ್ : 'ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಭಿವೃದ್ಧಿಯ ಪಯಣದಲ್ಲಿ ಹಿಂದುಳಿದಿರುವ ಸಮುದಾಯಗಳ ಬಗ್ಗೆ ಯೋಚಿಸಬೇಕು' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಕರೆ ನೀಡಿದ್ದಾರೆ.
ಗ್ವಾಲಿಯರ್‌ನ ಅಟಲ್ ಬಿಹಾರಿ ವಾಜಪೇಯಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಆಯಂಡ್ ಮ್ಯಾನೇಜ್‌ಮೆಂಟ್‌ನ (ಅಬಿವಿ- ಐಐಐಟಿಎಂ) ನಾಲ್ಕನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸಮಾಜದಲ್ಲಿ ಹಿಂದುಳಿದ ಜನರ ಅಭಿವೃದ್ಧಿಯಲ್ಲಿ ತಮ್ಮ ಪಾತ್ರದ ಕುರಿತು ತಿಳಿದುಕೊಳ್ಳುವುದು ಪ್ರತಿ ವ್ಯಕ್ತಿಯ, ವಿಶೇಷವಾಗಿ ಪ್ರತಿ ಯುವಕನ ಕರ್ತವ್ಯವಾಗಿದೆ.
ಜೀವನದಲ್ಲಿ ನಾವು ಮುನ್ನಡೆಯಬೇಕಾದರೆ, ಪೂರ್ವಜರು ನಡೆದುಬಂದ ಹಾದಿಯನ್ನು ಕಾಲ ಕಾಲಕ್ಕೆ ಪರೀಕ್ಷಿಸುವುದು ಅತ್ಯಗತ್ಯವಾಗಿದೆ' ಎಂದು ತಿಳಿಸಿದರು.
'ದೃಢ ನಿಶ್ಚಯದೊಂದಿಗೆ ಸರಿಯಾದ ದಾರಿ ಆರಿಸಿಕೊಂಡು ಮುನ್ನಡೆದದ್ದೇ ಆದಲ್ಲಿ ನೀವು ನಿಮ್ಮ ಗುರಿಯನ್ನು ಖಂಡಿತವಾಗಿ ಸಾಧಿಸುತ್ತೀರಿ. ಜೀವನದಲ್ಲಿ ಸಂತೃಪ್ತಿ ಪಡೆಯುತ್ತೀರಿ' ಎಂದು ಹೇಳಿದರು.
'ಉದ್ಯೋಗ ಸಿಗದ ವಿದ್ಯಾರ್ಥಿಗಳ ಸಾಮರ್ಥ್ಯ ಕಡಿಮೆಯೇನಿಲ್ಲ. ಜೀವನದಲ್ಲಿ ಮುನ್ನಡೆಯಲು ಅವರೂ ಸಹ ಅಸಂಖ್ಯಾತ ಅವಕಾಶಗಳನ್ನು ಪಡೆಯುತ್ತಾರೆ' ಎಂದರು.
ಇದೇ ವೇಳೆ, 'ಸೊನ್ನೆಯು ಭಾರತವು ಪ್ರಪಂಚಕ್ಕೆ ನೀಡಿರುವ ಕೊಡುಗೆ. ಅದರ ಬರಹ ರೂಪದ ಮೊದಲ ನಿದರ್ಶನವನ್ನು ಇಲ್ಲಿನ ಕೋಟೆಯೊಳಗಿರುವ ಚತುರ್ಭುಜ ದೇವಸ್ಥಾನದ ಶಾಸನದಲ್ಲಿ ಕಾಣಬಹುದಾಗಿದೆ' ಎಂದು ಬಣ್ಣಿಸಿದರು.
