ಕೊಚ್ಚಿ: ನಕಲಿ ಪ್ರಮಾಣಪತ್ರ ಪ್ರಕರಣದ ಆರೋಪಿ ಹಾಗೂ ಮಾಜಿ ಎಸ್‍ಎಫ್‍ಐ ಮುಖಂಡ ಕೆ. ವಿದ್ಯಾ ನೀಡಿದ ನಕಲಿ ಕೆಲಸದ ಅನುಭವ ಪ್ರಮಾಣಪತ್ರವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಗೂಗಲ್ ಸಹಾಯದಿಂದ ವಿದ್ಯಾ ಅವರ ಪೋನ್ ಪರಿಶೀಲಿಸಲಾಗಿದೆ. ಇದರಿಂದ ದೊರೆತ ಮಾಹಿತಿ ಪ್ರಕಾರ ಅಗಳಿ ಪೋಲೀಸರು ನಕಲಿ ಪ್ರಮಾಣಪತ್ರದ ಮೂಲ ಪತ್ತೆ ಹಚ್ಚಿದ್ದಾರೆ.
ಪಾಲಾರಿವಟ್ಟಂನಲ್ಲಿರುವ ಇಂಟರ್ನೆಟ್ ಕೆಫೆಯಲ್ಲಿ ನಕಲಿ ದಾಖಲೆಯ ಪ್ರಿಂಟ್‍ಔಟ್ ಪತ್ತೆಯಾಗಿದೆ. ವಿದ್ಯಾಳ ಪೋನ್‍ನಿಂದ ಇ-ಮೇಲ್‍ಗಳನ್ನು ವಶಪಡಿಸಿಕೊಂಡ ನಂತರ ಪೋಲೀಸರಿಗೆ ಕೆಫೆಯ ಬಗ್ಗೆ ಮಾಹಿತಿ ಸಿಕ್ಕಿತು. ಒಂದು ವರ್ಷದ ಹಿಂದೆ ನಿಲ್ಲಿಸಲಾಗಿದ್ದ ಕೆಫೆ ಇದು. ನಂತರ ಕೆಫೆ ಮಾಲೀಕರನ್ನು ಕರೆಸಿ ಪೋಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ತಾಂತ್ರಿಕ ತಜ್ಞರ ನೆರವಿನಿಂದ ಈ ಇಂಟರ್ ನೆಟ್ ಕೆಫೆಯಿಂದ ಸರ್ಟಿಫಿಕೇಟ್ ಪ್ರಿಂಟ್ ಮಾಡಿರುವುದು ಅರಿವಿಗೆ ಬಂದಿದೆ. ಕಾಲೇಜಿಗೆ ಸಲ್ಲಿಸಿದ್ದ ದಾಖಲೆ ನಾಶವಾಗಿದೆ ಎಂದು ವಿದ್ಯಾ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಳು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೋಲೀಸರಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ.
ಮೊಬೈಲ್‍ನಲ್ಲಿ ನಕಲಿ ದಾಖಲೆ ತಯಾರಿಸಿ ವಿದ್ಯಾ ಅಕ್ಷಯ ಕೇಂದ್ರಕ್ಕೆ ಮೇಲ್ ಕಳುಹಿಸಿ ಪ್ರಿಂಟೌಟ್ ತೆಗೆದುಕೊಂಡಿದ್ದಾಳೆ. ನಂತರ ಪೋನ್‍ನಿಂದ ಸಂಬಂಧಿಸಿದ ಮಾಹಿತಿಯನ್ನು ಅಳಿಸಲಾಗಿದೆ. ತಜ್ಞರ ಪರೀಕ್ಷೆಯಲ್ಲಿ ವಿದ್ಯಾ ಅವರ ಪೋನ್‍ನಿಂದ ಮಾಹಿತಿ ಪತ್ತೆಯಾಗಿದೆ. ಮಹಾರಾಜ ಕಾಲೇಜಿನ ನಕಲಿ ಕೆಲಸದ ಅನುಭವ ಪ್ರಮಾಣ ಪತ್ರವನ್ನು ಸೃಷ್ಟಿಸಿ ಅತಿಥಿ ಶಿಕ್ಷಕಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಳು ಎಂಬುದು ವಿದ್ಯಾ ವಿರುದ್ಧದ ಪ್ರಕರಣ. ಮಹಾರಾಜ ಕಾಲೇಜಿನಲ್ಲಿ 20 ತಿಂಗಳು ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಅಟ್ಟಪಾಡಿ ರಾಜೀವ್ ಗಾಂಧಿ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಸಂದರ್ಶನಕ್ಕೆ ಹಾಜರಾಗಲು ನಕಲಿ ದಾಖಲೆ ನೀಡಿದಾಗ ವಿದ್ಯಾ ಸಿಕ್ಕಿಬಿದ್ದಿದ್ದಳು.