ನವದೆಹಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವುದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಮೂವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠ ನಡೆಸುವುದು ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಇತರ ಕೆಲ ಅರ್ಜಿಗಳ ವಿಚಾರಣೆಯನ್ನು ಸಂವಿಧಾನ ಪೀಠವು ಪೂರ್ಣಗೊಳಿಸಿದ ನಂತರ ಮೂವರು ನ್ಯಾಯಮೂರ್ತಿಗಳ ಪೀಠವು ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಕೈಗೆತ್ತಿಕೊಳ್ಳುವುದು ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಮನೋಜ್ ಮಿಶ್ರಾ ಈ ಪೀಠದಲ್ಲಿದ್ದಾರೆ.
ಆಗ, ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು 'ನನ್ನ ಪ್ರಕರಣ ಮಗುವಿನ ಲೈಂಗಿಕ ಶೋಷಣೆಗೆ ಸಂಬಂಧಪಟ್ಟಿದ್ದು' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
'ಈ ಪ್ರಕರಣಗಳನ್ನು ಮೂವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಸಂವಿಧಾನ ಪೀಠ ತನ್ನ ಮುಂದಿರುವ ಅರ್ಜಿಗಳನ್ನು ವಿಲೇವಾರಿ ಮಾಡಿದ ನಂತರ ಇವುಗಳನ್ನು ವಿಚಾರಣಾ ಪಟ್ಟಿಗೆ ಸೇರಿಸಲಾಗುವುದು' ಎಂದು ಸಿಜೆಐ ಸ್ಪಷ್ಟಪಡಿಸಿದರು.
ಪ್ರಕರಣಗಳು: ವೈವಾಹಿಕ ಅತ್ಯಾಚಾರ ಅಪರಾಧೀಕರಣಕ್ಕೆ ಸಂಬಂಧಿಸಿ ಹಲವು ಅರ್ಜಿಗಳು ವಿಚಾರಣೆಗೆ ಬಾಕಿ ಇವೆ.
ವೈವಾಹಿಕ ಅತ್ಯಾಚಾರ ಆರೋಪದ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯೂ ಸೇರಿದೆ.
'ಪತ್ನಿ ಮೇಲಿನ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪಗಳಿಂದ ಪತಿಗೆ ವಿನಾಯಿತಿ ನೀಡಿದಲ್ಲಿ, ಅದು ಸಂವಿಧಾನದ 14ನೇ ವಿಧಿಯ (ಕಾನೂನು ಮುಂದೆ ಎಲ್ಲರೂ ಸಮಾನರು) ಆಶಯಕ್ಕೆ ವಿರುದ್ಧವಾಗಲಿದೆ' ಎಂದು ಕಳೆದ ವರ್ಷ ಮಾರ್ಚ್ 23ರಂದು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.
ಪತಿ ವಿರುದ್ಧ ಪತ್ನಿ ಕಾನೂನು ಕ್ರಮ ಕೈಗೊಳ್ಳಲು ಈ ತೀರ್ಪು ದಾರಿ ಮಾಡಿಕೊಟ್ಟಿತ್ತು.