ಮುಂಬೈ: ಎಲ್ಲ ರಾಜ್ಯಪಾಲರು ಸಾಂವಿಧಾನಿಕ ಕರ್ತವ್ಯಗಳ ನಿರ್ವಹಣೆಯಲ್ಲಿ ತಟಸ್ಥವಾಗಿರಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಪಾಲರಿಗೆ ಸ್ಪಷ್ಟ ಸಂದೇಶ ಕಳುಹಿಸಬೇಕು ಎಂದು ಎನ್‌ಸಿಪಿ ಮನವಿ ಮಾಡಿದೆ.
ಬಿಜೆಪಿಯೇತರ ರಾಜ್ಯಗಳಲ್ಲಿನ ರಾಜ್ಯ ಸರ್ಕಾರದ ವಿಷಯದಲ್ಲಿ ಕೆಲ ರಾಜ್ಯಪಾಲರು ಹಸ್ತಕ್ಷೇಪ ನಡೆಸುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅವರಿಗೆ ಎನ್‌ಸಿಪಿಯ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಅವರು ಮನವಿ ಮಾಡಿದ್ದಾರೆ.
ತಮ್ಮ ಅಭಿಪ್ರಾಯವನ್ನು ಸಮರ್ಥಿಸಲು ಕ್ರಾಸ್ಟೊ ಅವರು, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮತ್ತು ತಮಿಳುನಾಡಿನ ಈಗಿನ ರಾಜ್ಯಪಾಲ ಆರ್.ಎನ್. ರವಿ ಅವರ ಉದಾಹರಣೆ ನೀಡಿದ್ದಾರೆ.
'ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ಕಾರ್ಯವೈಖರಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದುದು. ರಾಜ್ಯಪಾಲರ ಸ್ಥಾನವು ಸಾಂವಿಧಾನಿಕವಾಗಿದೆ ಮತ್ತು ಅವರು ರಾಜ್ಯದ ಕಾವಲುಗಾರರ ಸ್ಥಾನದಲ್ಲಿ ತಟಸ್ಥವಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಇತ್ತೀಚೆಗೆ, ಬಿಜೆಪಿ ನೇತೃತ್ವದ ಈ ಸರ್ಕಾರದ ಅವಧಿಯಲ್ಲಿ ನೇಮಕಗೊಂಡ ರಾಜ್ಯಪಾಲರು ಇದನ್ನು ಮರೆತಿದ್ದಾರೆ' ಎಂದು ಅವರು ದೂರಿದ್ದಾರೆ.
'ರಾಜ್ಯಪಾಲರು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಮೀರಿ ಕಾರ್ಯನಿರ್ವಹಿಸಿದ ಮತ್ತೊಂದು ಉದಾಹರಣೆಯೆಂದರೆ, ಮಹಾರಾಷ್ಟ್ರ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು, ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಿಗಿಂತಲೂ, ರಾಜಕೀಯ ಪಕ್ಷವೊಂದರ ಪ್ರತಿನಿಧಿಯಂತೆ ವರ್ತಿಸಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
'ಯಾವುದೇ ರಾಜ್ಯದ ರಾಜ್ಯಪಾಲರು ತಾವು ನೇತೃತ್ವ ವಹಿಸುವ ಆಯಾ ರಾಜ್ಯದ ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಮಾತ್ರ ಸಚಿವರನ್ನು ನೇಮಕ ಮಾಡಬಹುದು ಅಥವಾ ತೆಗೆದುಹಾಕಬಹುದು ಎಂದು ಸಂವಿಧಾನವು ಹೇಳುತ್ತದೆ. ಆದರೆ, ಆರ್.ಎನ್. ರವಿ ಅವರು ಇದನ್ನು ಕಡೆಗಣಿಸಿ ತಮ್ಮ ರಾಜಕೀಯ ಒಲವು ಪ್ರದರ್ಶಿಸುವ ಅಸಾಂವಿಧಾನಿಕ ನಿರ್ಧಾರವನ್ನು ಕೈಗೊಂಡಿದ್ದಾರೆ' ಎಂದೂ ಕ್ರಾಸ್ಟೊ ಗಮನ ಸೆಳೆದಿದ್ದಾರೆ.