ಮಧೂರು: ಬಿರುಸಿನ ಮಳೆಗೆ ಮಧೂರು ಗ್ರಾಮ ಪಂಚಾಯಿತಿಯ ಕೊಲ್ಯ ಎರಿಕಳ ಕೊಯಿಪಾಡಿಯಲ್ಲಿ ಸಾರ್ವಜನಿಕ ಬಾವಿ ಕುಸಿದು ಆವರಣಗೋಡೆ ಬಾವಿಯೊಳಗೆ ಸೇರಿಕೊಂಡಿದೆ. ಈ ಪ್ರದೇಶದ ಹಲವು ಕುಟುಂಬಗಳು ಈ ಬಾವಿ ನೀರನ್ನು ಆಶ್ರಯಿಸುತ್ತಿದ್ದಾರೆ.
ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಕೆ. ಗೋಪಾಲಕೃಷ್ಣ ಕೂಡ್ಲು, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಆರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ, ವಾರ್ಡ್ ಸದಸ್ಯರಾದ ಉದಯಕುಮಾರ್ ಸಿ, ಮಾಜಿ ಬ್ಲೋಕ್ ಪಂಚಾಯಿತಿ ಸದಸ್ಯ ಎ.ಪ್ರಭಾಶಂಕರ್ ಮಾಸ್ಟರ್ ಹಾಗೂ ಮುಂತಾದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದರು. 20ವರ್ಷಕ್ಕೂ ಹಿಂದೆ ಕುಡಿಯುವ ನೀರಿನ ಅವಶ್ಯಕತೆಗಾಗಿ ನಿರ್ಮಿಸಿದ ಬಾವಿ ಇದಾಗಿದ್ದು, ಕಳೆದ ಕೆಲವು ದಿನಗಳಿಂದ, ನಿರಂತರವಾಗಿ ಸುರಿದ ಮಳೆಯಿಂದ ಬಾವಿ ಕುಸಿದಿದೆ.