ಕಾಸರಗೋಡು: ಪೆರಿಯ ಅಲಕ್ಕೋಡ್ ಗೋಕುಲಂ ಗೋಶಾಲೆಯಲ್ಲಿ ನಡೆದ ಮಲ್ಲಾಡಿ ಸಹೋದರರ ಸಂಗೀತ ಕಛೇರಿಯು ಅಕ್ಷರಶಃ ಅಪೂರ್ವ ರಾಗಗಳ ಅಮೃತ ವರ್ಷಿಣಿಯಂತಾಯಿತು. ಗೋವುಗಳಿಗಾಗಿ ನಡೆಸಿಕೊಂಡು ಬರುವ ಪ್ರತಿತಿಂಗಳ ಕಛೇರಿಯಲ್ಲಿ ಮೂರೂವರೆ ಗಂಟೆಗಳ ಕಾಲ ಗೋವುಗಳು ಮೌನವಾಗಿ ಆಲಿಸಿ, ತಲೆ ಅಲ್ಲಾಡಿಸಿ, ನರ್ತನಮಾಡಿಯೂ ಸಂಗೀತ ಆಸ್ವಾದನೆ ಮಾಡಿದ್ದನ್ನು ಕಂಡಾಗ ಶ್ರೇಷ್ಠ ಗಾಯಕ ಸಹೋದರರಿಗೂ ಹಾಗೂ ಇತರ ಶ್ರೋತೃಗಳಿಗೂ ಸಂಭ್ರಮವುಂಟಾಗಿ ರೋಮಾಂಚನವಾಗುವಂತಾಯಿತು.
ಅವರು ಹಂಸಧ್ವನಿ ರಾಗದಲ್ಲಿ ವರ್ಣದಿಂದ ಪ್ರಾರಂಭಿಸಿ ಅತೀ ಅಪೂರ್ವವಾದ ಸುಪ್ರದೀಪರಾಗದ ಏಕೈಕ ಕೃತಿಯಾದ ತ್ಯಾಗರಾಜ ಸ್ವಾಮಿಗಳ ವರಶಿಕಿವಾಹನ ಮತ್ತು ಧೇನುಕರಾಗದಲ್ಲಿ ಕಾಮಧೇನುಕಾಂ ಆಶ್ರಯೇ ಮೊದಲ್ಗೊಂಡು ನಂತರ ಗಾನಮೂರ್ತಿ - ಮೋಹನ ರಾಗವೂ , ಬಳಿಕ ರೇವತಿ ರಾಗದ ಜಯತಿ ಜಯತಿ ಗೋಮಾತೆ , ಸೌರಾಷ್ಟ್ರ ರಾಗದಲ್ಲಿ ಶಿವ ಶಿವ ಭವ ಶರಣಂ ಆಲಾಪಿಸಿ ಮಂಗಳ ಹಾಡಿದರು. ಇದು ಸಾಮಾನ್ಯ ಸಂಗೀತ ಕಛೇರಿಯಲ್ಲ, ಪ್ರಕೃತಿಗೆ ಸಮರ್ಪಣೆ ಆಗಿದೆಯೆಂದು ತಿಳಿಸಿದ ಅವರು ಮತ್ತೊಮ್ಮೆ ದೀಪಾವಳಿ ಸಂಗೀತೋತ್ಸವಕ್ಕೆ ಬರುತ್ತೇನೆ ಎಂದು ಹೇಳಿದರು.