ನವದೆಹಲಿ: ಲೋಕಸಭೆಯಲ್ಲಿ ಸಂಖ್ಯಾಬಲವನ್ನು ಹೊಂದಿರುವ ನಂಬಿಕೆ ನಿಮಗೆ ಇದ್ದರೆ ಸದನದಲ್ಲಿ ಸರ್ಕಾರದ ಮಸೂದೆಗಳನ್ನು ತಡೆಹಿಡಿಯಿರಿ ಎಂದು ಪ್ರತಿಪಕ್ಷಗಳಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವು ಬಾಕಿಇರುವ ಸಮಯದಲ್ಲಿ ಸರ್ಕಾರವು ಶಾಸಕಾಂಗ ವ್ಯವಹಾರವನ್ನು ಕೈಗೆತ್ತಿಕೊಂಡಿರುವುದನ್ನು ಪ್ರತಿಪಕ್ಷಗಳು ಆಕ್ಷೇಪಿಸಿದ ನಂತರ ಜೋಶಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
'ವಿಪಕ್ಷಗಳು ದಿಢೀರನೆ ಅವಿಶ್ವಾಸ ನಿರ್ಣಯವನ್ನು ಮಂಡಿಸಿವೆ ಅಂದರೆ ಸರ್ಕಾರವು ಶಾಸಕಾಂಗದ ಕೆಲಸಗಳನ್ನು ಮಾಡಬಾರದು ಎಂಬುದೇ ಇದರ ಅರ್ಥವಲ್ಲವೇ?'ಎಂದು ಸಚಿವರು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ವಿರೋಧ ಪಕ್ಷಗಳ ಸಂಸದರು ವಾರಾಂತ್ಯದಲ್ಲಿ ಮಣಿಪುರಕ್ಕೆ ತೆರಳಿ ಗಲಭೆ ಪೀಡಿತ ರಾಜ್ಯದ ಜನರೊಂದಿಗೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, 'ಮಣಿಪುರಕ್ಕೆ ಹೋಗಿ ಬರಲಿ. ಅಲ್ಲಿನ ತಳಮಟ್ಟದ ಯಾವುದೇ ವರದಿ ತಂದರೂ ಚರ್ಚೆಗೆ ಸಿದ್ಧವಿದ್ದೇವೆ. ಚರ್ಚೆಗೆ ಅವರು ಅವಕಾಶ ನೀಡಬೇಕಷ್ಟೆ. ಅವರು ಚರ್ಚಿಸಲು ಬಯಸಿದರೆ, ಸತ್ಯ ಹೊರಬರಲು ಬಯಸಿದರೆ, ಎಲ್ಲವನ್ನೂ ಸದನದಲ್ಲಿ ಇಡಲು ಸಿದ್ಧರಿದ್ದೇವೆ. ಚರ್ಚೆಗೆ ಅದಕ್ಕಿಂತ ಉತ್ತಮ ಸ್ಥಳ ಯಾವುದಿದೆ'ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಗೌರವ್ ಗೊಗೊಯ್ ಅವರು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಬುಧವಾರ ಅಂಗೀಕರಿಸಿರುವ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ಸಂಪರ್ಕಿಸಿದ ನಂತರ ಅದನ್ನು ಚರ್ಚೆಗೆ ತೆಗೆದುಕೊಳ್ಳುವ ದಿನಾಂಕವನ್ನು ನಿರ್ಧರಿಸುವುದಾಗಿ ಹೇಳಿದ್ದರು.
ಜುಲೈ 20ರಂದು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ವಿಷಯದ ಕುರಿತು ಸಂಸತ್ತಿನ ಎರಡೂ ಸದನಗಳಲ್ಲಿ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ.