ಮಧೂರು: ಭಜನಾ ಸಂಕೀರ್ತನ ಗುರುಗಳಾದ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ನೇತೃತ್ವದಲ್ಲಿ ಕರ್ಕಾಟಕ ಮಾಸದ ರಾಮಾಯಣ ಮಾಸಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಮನೆ ಮನೆ ಭಜನಾ ಅಭಿಯಾನ ಉಳಿಯತ್ತಡ್ಕದ ಶ್ರೀಶಕ್ತಿ ಬಾಲವೃಂದ ಮಕ್ಕಳ ಸಂಘದ ಸಹಕಾರದಲ್ಲಿ ನಡೆಯಿತು. ಕಳೆದ ಹಲವಾರು ವರ್ಷಗಳಿಂದ ಕರ್ಕಾಟಕ ಮಾಸದಲ್ಲಿ ಒಂದು ತಿಂಗಳ ಕಾಲ ದಿನಂಪ್ರತಿ ಮನೆ ಮನೆ ಭಜನೆ ಎನ್ನುವ ಭಜನಾ ಕೈಂಕರ್ಯವನ್ನು ಹಲವಾರು ಭಜನಾ ಸಂಘಗಳು ನಡೆಸಿಕೊಂಡು ಬರುತ್ತಿದೆ. ಹಿರಿಯ ಹರಿದಾಸರರಾಗಿರುವ ಜಯಾನಂದ ಕುಮಾರ್ ಹೊಸದುರ್ಗ ಅವರು ಹಮ್ಮಿಕೊಂಡಿರುವ ಈ ಕಾರ್ಯವನ್ನು ಅವರ ನೇತೃತ್ವದ ಭಜನಾ ಸಂಘಗಳು ಪ್ರತಿವರ್ಷ ನಡೆಸಿಕೊಂಡು ಬರುತ್ತಿದೆ. ಜಿಲ್ಲೆಯ ಅನೇಕ ಕಡೆ ನಡೆಯುವ ಈ ಭಜನಾ ಸೇವೆಯು ಕರ್ಕಾಟಕ ಮಾಸದ ಸಂಕಷ್ಟಗಳನ್ನು ದೂರೀಕರಿಸಿ ಎಲ್ಲರಲ್ಲಿಯೂ ಸತ್ ಚಿಂತನೆಗಳನ್ನು ಹುಟ್ಟು ಹಾಕಿಸಬೇಕು ಎಂಬ ಉದಾತ್ತ ಧ್ಯೇಯವನ್ನು ಹೊಂದಿದೆ ಎಂದು ಜಯಾನಂದ ಕುಮಾರ್ ಅಭಿಪ್ರಾಯ ಪಟ್ಟರು.
ದೈವಕೃಪೆಯಿಂದ ಮನಸ್ಸಿನ ಸಂಕಲ್ಪಗಳು ಈಡೇರುತ್ತದೆ ಎಂಬ ಆಶೋತ್ತರವನ್ನು ಒಳಗೊಂಡು ಮಾಡುವ ಈ ಭಜನಾ ಸೇವೆಯು ರಾಮಾಯಣ ಮಾಸವನ್ನು ಪುಣ್ಯಪ್ರದವಾಗಿಸಿ ದೈವಿಕ ಚೈತನ್ಯವನ್ನು ಮೂಡಿಸಲಿ ಎಂಬ ಉದ್ದೇಶದಿಂದ ನಡೆಯುತ್ತದೆ. ಮಕ್ಕಳ ಭಜನಾ ಸಂಘದ ಮುಖೇನ ಮಾಡುವ ಈ ಸೇವೆಯಿಂದ ಮಕ್ಕಳ ಮನಸ್ಸಿನಲ್ಲಿ ಆಧ್ಯಾತ್ಮಿಕ ಚಿಂತನೆಗಳುಭಜನೆಯ ಮಹತ್ವಗಳು ತಿಳಿಯುತ್ತದೆ.ಮಕ್ಕಳು ದೊಡ್ಡವರಾಗುವಾಗ ತಂದೆ ತಾಯಿ ಗುರು ಹಿರಿಯರಿಗೆ ಗೌರವ ನೀಡುವಂತಹ ಸಂಸ್ಕಾರ ಮುಖ್ಯ ನಮ್ಮ ಮಕ್ಕಳು ದೇಶಕ್ಕೆ ಜ್ಞಾನ ದೀವಿಗೆಯಾಗಿ ಭಾರತ ಮಾತೆಯ ನಂದಾದೀಪವಾಗಿ ಬೆಳಗಬೇಕು ಎಂದು ಜಯಾನಂದ ಕುಮಾರ್ ಹೆಳಿದರು.