ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ತಿಂಗಳ ಹಿಂದೆ ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಚರಂಡಿ ನಿರ್ಮಿಸುತ್ತಿರುವ ಬಗ್ಗೆ ಅದರ ಅವೈಜ್ಞಾನಿಕತೆಯನ್ನು ಬೊಟ್ಟುಮಾಡಿ ದೂರು ನೀಡಿದ್ದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ರಸ್ತೆ ಪೂರ್ತಿ ಭಾರೀ ಪ್ರಮಾಣದ ಮಳೆನೀರು ಕಟ್ಟಿನಿಂತು ಸರ್ವಿಸ್ ರಸ್ತೆ, ಕೆರೆಯಂತೆ ಭಾಸವಾಗುತ್ತಿದ್ದು ಸಂಚಾರ ದುರ್ಗಮವಾಗಿದೆ.
ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೀಡಾಗಿದ್ದು, ಸಮೀಪದ ಅಂಗಡಿಗಳಿಗೂ ನೀರು ನುಗ್ಗಿದೆ.
ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವುದರಿಂದ ಮೊಗ್ರಾಲ್ ಪುತ್ತೂರು ಪೇಟೆಗೆ ನೀರು ನುಗ್ಗುತ್ತದೆ ಎಂದು ಸ್ಥಳೀಯರು, ಸಾರ್ವಜನಿಕರು, ಜನಪ್ರತಿನಿಧಿಗಳು ಮಳೆಗೆ ಮುನ್ನ ಯುಎಲ್‍ಸಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಲವಲೇಶ ಗಮನಿಸಿರಲಿಲ್ಲ. ನೂರಾರು ವಿದ್ಯಾರ್ಥಿಗಳು ಹಾಗೂ ರೋಗಿಗಳು ಪರದಾಡುವಂತಾಗಿದೆ. ಪಂಚಾಯತಿ ಅಧ್ಯಕ್ಷೆ ನ್ಯಾಯಾದಿ. ಶೆಮೀರಾ ಫೈಸಲ್, ಮೊಗ್ರಾಲ್ ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪಿಟಿಎ ಅಧ್ಯಕ್ಷ ಮಾಹಿನ್ ಕುನ್ನಿಲ್ ಮತ್ತು ಎಸ್‍ಎಂಸಿ ಅಧ್ಯಕ್ಷ ಮಹ್ಮದ್ ಬಳ್ಳೂರು ಅವರು ಅವಘಡಗಳು ಸಂಭವಿಸುವ ಮೊದಲು ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹೊಸದಾಗಿ ನಿರ್ಮಿಸಲಾದ ರೈಲುಮಾರ್ಗದ ತಳದ ಬಳಿ ಚರಂಡಿ ನಿರ್ಮಿಸಲಾಗಿದೆ. ಈ ಹಿಂದೆ ರಸ್ತೆ ನಿರ್ಮಾಣಕ್ಕೆ ಮಣ್ಣು ತುಂಬಿಸಲಾಗಿತ್ತು.ಮಳೆಗಾಲದಲ್ಲಿ ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ನೀರು ನಿಲ್ಲುತ್ತಿತ್ತು. ಹಲವು ಪ್ರದೇಶಗಳಿಂದ ಬರುವ ನೀರು ಮೊಗ್ರಾಲ್ ಪುತ್ತೂರು ಪೇಟೆ ಮೂಲಕ ನದಿ ಹಾಗೂ ಸಮುದ್ರ ಸೇರುತ್ತಿತ್ತು. ಈಗ ನಿರ್ಮಾಣಗೊಂಡಿರುವ ಒಳಚರಂಡಿ ಈಗಿರುವ ಎದುರುಗಡೆಗಿಂತ ಎತ್ತರದಲ್ಲಿದೆ. ಇದರಿಂದಾಗಿ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಟ್ಟಣ ಜಲಾವೃತವಾಗಿದೆ. ಶಾಲೆ, ಅಂಗನವಾಡಿ ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ನೀರು ಹರಿದು ಹೋಗುವಲ್ಲಿ ಅವೈಜ್ಞಾನಿಕ ಚರಂಡಿ ಮಾಡಲಾಗಿದೆ. ಇದರಿಂದ ಚರಂಡಿಯಲ್ಲಿ ಕಟ್ಟಿನಿಂತಿರುವ ನೀರು ವ್ಯಾಪಕ ಸಮಸ್ಯೆ ಸೃಷ್ಟಿಸಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
ಮೊಗ್ರಾಲ್ ಪುತ್ತೂರಿನ ಡ್ರೈನೇಜ್ ನೀರಲ್ಲಿ ಕೊಚ್ಚಿಹೋಗುವ ರೀತಿಯಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.