ನವದೆಹಲಿ: ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಇಂದು ಉಭಯ ನಾಯಕರು ಉಭಯ ದೇಶಗಳ ಹಿತಾಸಕ್ತಿ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆಗೆ ಮುನ್ನ ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. 75 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರಿಸಲು ಉಭಯ ದೇಶಗಳಿಗೆ ಇದು ಸೂಕ್ತ ಸಮಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಆರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳ ಭೇಟಿಗಾಗಿ ರಾನಿಲ್ ವಿಕ್ರಮಸಿಂಘೆ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ. ಆದೇ ದಿನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಶ್ರೀಲಂಕಾ ಕಳೆದ ವರ್ಷ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ಇದಾದ ನಂತರ ಲಂಕಾ ಅಧ್ಯಕ್ಷರು ಭಾರತಕ್ಕೆ ಕೈಗೊಂಡ ಮೊದಲ ಭೇಟಿ ಇದಾಗಿದೆ. ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾಕ್ಕೆ ಭಾರತವು ಸುಮಾರು ₹32.83 ಸಾವಿರ ಕೋಟಿ ಮೌಲ್ಯದ ಆರ್ಥಿಕ ಸಹಾಯ ಮಾಡಿ ನೆರವಿನ ಹಸ್ತ ಚಾಚಿತ್ತು.