ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಸನಿಹದ ಕೊಮ್ಮಂಗಳದ ಕಳಾಯಿ ನಿವಾಸಿ ದಿ. ನಾರಾಯಣ ನೋಂಡ ಅವರ ಪುತ್ರ ಪ್ರಭಾಕರ ನೋಂಡ(42)ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಪೊಲಿಸರು ಬಂಧಿಸಿದ್ದಾರೆ.
ಮೊಗ್ರಾಲ್‍ಪುತ್ತೂರು ಪಂಜದಗುಡ್ಡೆ ನಿವಾಸಿ, ಪ್ರಸಕ್ತ ಚೌಕಿ ಕೆ.ಕೆ ಪುರಂನಲ್ಲಿ ವಾಸಿಸುತ್ತಿರುವ ಮಹಮ್ಮದ್ ಇಸ್ಮಾಯಿಲ್ ಬಂಧಿತ. ಈ ಮೂಲಕ ಪಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಏಳಕ್ಕೇರಿದೆ. ಕೊಲೆ ರೋಪಿಗಳಿಗೆ ಪರಾರಿಯಾಗಲು ಮಹಮ್ಮದ್ ಇಸ್ಮಾಯಿಲ್ ಸೌಕರ್ಯ ಒದಗಿಸಿಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೂ. 2ರಂದು ರಾತ್ರಿ
ಪ್ರಭಾಕರ ನೋಂಡ ಅವರ ಮೃತದೇಹ ಮನೆ ಸನಿಹದ ಶೆಡ್ಡಿನಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಪ್ರಭಾಕರ ನೋಂಡ ಅವರ ಸಹೋದರ ಜಯರಾಮ ನೋಂಡ, ಮೊಗ್ರಾಲ್‍ಪುತ್ತೂರಿನ ಇಸ್ಮಾಯಿಲ್, ಅಟ್ಟೆಗೋಳಿ ನಿವಾಸಿ ಖಾಲಿದ್, ಕಳತ್ತೂರು ಚೆಕ್‍ಪೋಸ್ಟ್ ಸನಿಹದ ನಿವಾಸಿ ಮಹಮ್ಮದ್ ಶೆರೀಫ್, ಕಳತ್ತೂರು ಪಳ್ಳಂ ನಿವಾಸಿ ಅಬ್ದುಲ್ ಕರೀಂ ಯಾನೆ ಸಲೀಂ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ.