ಬದಿಯಡ್ಕ: ಕರ್ನಾಟಕದಿಂದ ಉದ್ಯೋಗವನ್ನರಸಿ ಕಾಸರಗೋಡಿಗೆ ಬಂದಿದ್ದ ದುರ್ಗೇಶ್ ಅವರನ್ನು ಬದಿಯಡ್ಕ ಮೂಲದ ಯಮುನಾ ವಿವಾಹವಾಗಿ ಸಂಕಷ್ಟದಿಂದ ಕುಟುಂಬ ಸಾಗಿಸುತ್ತಿದ್ದರು. ಕುಟುಂಬ ಸಮೇತರಾಗಿ ಕಳೆದ 20 ವರ್ಷಗಳಿಂದ ಬದಿಯಡ್ಕ ಪಂಚಾಯಿತಿಯ ಕೆಡೆಂಜಿಯಲ್ಲಿ ಈ ದಂಪತಿಗಳು ವಾಸವಾಗಿದ್ದಾರೆ. ಮಳೆಗಾಲದಲ್ಲಿ ಪಾಳು ಬಿದ್ದ ಗುಡಿಸಲಿನಲ್ಲಿ ವಾಸ ಇವರದು. ಪಂಚಾಯಿತಿಯವರು ಗುಡಿಸಲು ದುರಸ್ತಿ ಮಾಡಿದ್ದರು. ನಿವೇಶನ ಇಲ್ಲದ ಕಾರಣ ಸ್ವಂತ ಮನೆ ನಿರ್ಮಿಸಲೂ ಅವರಿಗೆ ಸಾಧ್ಯವಾಗಿರಲಿಲ್ಲ.
ಇದೀಗ ಯಮುನಾ ಸರ್ಕಾರದಿಂದ ವಿತರಣೆಯಾಗುವ ನಾಲ್ಕು ಸೆಂಟ್ಸ್ ಜಮೀನು ಒಡತಿಯಾಗಿದ್ದಾರೆ. ಬೀಡಿ ಕೆಲಸ ನಿರ್ವಹಿಸಿ ಪತಿಗೆ ಹೆಗಲು ನೀಡುತ್ತಿದ್ದ ಯಮುನಾ ತನ್ನ ಹೆಸರಿನಲ್ಲಿಯೇ ಮುದ್ರಿತವಾಗಿರುವ ಪ್ರಮಾಣಪತ್ರವನ್ನು ಕೊನೆಗೂ ಶುಕ್ರವಾರ ನಡೆದ ಸರ್ಕಾರದ ಕಾರ್ಯಕ್ರಮದಲ್ಲಿ ಪಡೆದುಕೊಂಡು ನಿಟ್ಟುಸಿರು ಬಿಟ್ಟರು. ದುರ್ಗೇಶ ಕೂಲಿ ಕೆಲಸ ಮಾಡುತ್ತಿದ್ದು, ಯಮುನಾ ಆರೋಗ್ಯ ಸಮಸ್ಯೆಯಿಂದ ದುಡಿಯಲು ಪರದಾಡುವಂತಾಗಿದೆ. ಲೈಫ್ ಯೋಜನೆಯಡಿ ತನ್ನ ಮಗುವಿನೊಂದಿಗೆ ಸಂತೃಪ್ತಿಯಿಂದ ಇನ್ನಾದರೂ ಮಲಗಲು ಮನೆಯೊಂದರ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ಸಮಾಧಾನ ಅವರಲ್ಲಿದೆ.