ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದ ಮುಖ್ಯ ಮಾರುಕಟ್ಟೆ ಪ್ರದೇಶಕ್ಕೆ ಅವಶೇಷಗಳ ರಾಶಿಯೇ ನುಗ್ಗಿಬಂದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ, ಯಾವುದೇ ಜೀವಹಾನಿ ಆಗಿರುವ ಬಗ್ಗೆ ವರದಿ ಬಂದಿಲ್ಲ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮೇಘಸ್ಫೋಟವು ಶುಕ್ರವಾರ ತಡರಾತ್ರಿ ಕೇಂದ್ರಾಡಳಿತ ಪ್ರದೇಶದ ಗ್ಯಾಂಗಲ್ಸ್ ಪ್ರದೇಶಕ್ಕೆ ಅಪ್ಪಳಿಸಿದೆ. ಲೇಹ್ ಪಟ್ಟಣದ ಹಲವು ಭಾಗಗಳು ಜಲಾವೃತವಾಗಿವೆ. ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡ ಬಂದ ಅವಶೇಷಗಳು ತಗ್ಗು ಪ್ರದೇಶಗಳಲ್ಲಿನ ಅನೇಕ ಕಟ್ಟಡಗಳಿಗೆ ನುಗ್ಗಿ, ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
' ಹಠಾತ್ ಪ್ರವಾಹ ಸಂಭವಿಸಿದ ಕೂಡಲೇ ಸೇನೆಯ ಯೋಧರು ಸ್ವಯಂಪ್ರೇರಿತವಾಗಿ ತಕ್ಷಣವೇ ಆಗಮಿಸಿ ಹಾನಿ ತಗ್ಗಿಸಲು ನೆರವಾದರು. ಸೇನೆಗೆ ಧನ್ಯವಾದ ಹೇಳುವೆ' ಎಂದು ಲಡಾಖ್ ಬೌದ್ಧ ಸಂಘದ ಅಧ್ಯಕ್ಷ ಥುಪ್‌ಸ್ತಾನ್ ಚೆವ್ವಾಂಗ್ ತಿಳಿಸಿದ್ದಾರೆ.