ಕಾಸರಗೋಡು: ಬಿರುಸಿನ ಮಳೆಯಿಂದ ಜಿಲ್ಲೆಯಲ್ಲಿ ಬಹುತೇಕ ಹೊಳೆಗಳು ತುಂಬಿ ಹರಿಯುತ್ತಿದ್ದು, ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ಜನತೆಗೆ ಎಚ್ಚರಿಕೆ ನೀಡಲಾಗಿದೆ. ಚಂದ್ರಗಿರಿ ಹೊಳೆ ತುಂಬಿಹರಿಯುತ್ತಿದ್ದು, ಹೊಳೆ ಅಂಚಿನಲ್ಲಿರುವವರು ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬಿರುಸಿನ ಮಳೆಯಾಗುತ್ತಿದ್ದು, ಜುಲೈ 28ರ ವರೆಗೂ ಬಿರುಸಿನ ಮಳೆ ಮುಂದುವರಿಯಲಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಕಾಸರಗೋಡು ಜಿಲ್ಲೆಯ ಹೊಸದುರ್ಗ, ವೆಳ್ಳರಿಕುಂಡು ತಾಲೂಕಿನಲ್ಲಿ ಬಿರುಸಿನ ಮಳೆ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಜಿಲ್ಲಾಧಿಕಾರಿ ಇನ್ಬಾಶೇಖರ್ ನಿರ್ದೇಶ ಪ್ರಕಾರ ಅವಳಿ ತಾಲೂಕಲ್ಲಿ ರಜೆ ಘೋಷಿಸಲಾಗಿತ್ತು. ಬಿರುಸಿನ ಮಳೆಗೆ ವೆಳ್ಳರಿಕುಂಡು ಹಾಗೂ ಹೊಸದುರ್ಗ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳು ಕುಸಿದು ಬಿದ್ದಿದೆ. ತೃಕ್ಕರಿಪುರ, ಕೋಟಿಕುಳಂ, ಕಾಸರಗೋಡಿನ ಚೇರಂಗೈ, ಉಪ್ಪಳ, ಮಂಜೇಶ್ವರದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಇದರಿಂದ ಹಲವು ತೆಂಗಿನ ಮರಗಳು ಸಮುದ್ರ ಸೇರಿಕೊಂಡಿದೆ. ಸಮುದ್ರ ಪ್ರಕ್ಷುಬ್ದಗೊಮಡಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಪ್ರಾಕೃತಿಕ ವಿಕೋಪ ತಡೆಗಟ್ಟುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣ ಪಡೆ ಸಜ್ಜುಗೊಂಡಿರುವಂತೆ ಜಿಲ್ಲಾಧಿಕಾರಿ ವಿಪತ್ತುನಿರ್ವಹಣಾ ಪಡೆಗೆ ಸೂಚಿಸಿದ್ದಾರೆ.
ಮೀನುಗಾರರ ಪ್ರತಿಭಟನೆ:
ಬೇಕಲ ಸನಿಹ ತೃಕ್ಕನ್ನಾಡಿನಲ್ಲಿ ಸಮುದ್ರಕೊರೆತ ತಡೆಗಟ್ಟುವಂತೆ ಹಲವು ವರ್ಷಗಳಿಂದ ಮಾಡಿಕೊಂಡಿರುವ ಮನವಿಗೆ ಕಿವಿಗೊಡದ ಸರ್ಕಾರದ ಧೋರಣೆ ಖಂಡಿಸಿ ಮೀನುಗಾರರು ದೋಣಿಗಳನ್ನೇ ರಸ್ತೆಯಲ್ಲಿ ಅಡ್ಡ ಇರಿಸಿ ಪ್ರತಿಭಟಿಸಿದರು. ಆರಂಭದಲ್ಲಿ ಮರದ ದಿಮ್ಮಿಗಳನ್ನಿರಿಸಿ ರಸ್ತೆ ತಡೆ ನಿರ್ಮಿಸಿ ಸರ್ಕಾರದ ಗಮನಸೆಳೆಯಲು ಯತ್ನಿಸಿದ ಮೀನುಗಾರರನ್ನು ಬೆದರಿಸಿ ಹಿಂತಿರುಗುವಂತೆ ಮಾಡಿ, ತಡೆ ತೆರವುಗೊಳಿಸಿದ್ದರು. ಈ ಸಂದರ್ಭ ಮೀನುಗಾರರು ಮತ್ತು ಪೊಲೀಸರ ಮಧ್ಯೆ ವಗ್ವಾದ ನಡೆದಿದ್ದು, ನಂತರ ಮೀನುಗಾರರು ತಮ್ಮ ಮೀನುಹಿಡಿಯುವ ದೋಣಿಗಳನ್ನೇ ರಸ್ತೆಗೆ ಅಡ್ಡ ಇರಿಸಿ ಪ್ರತಿಭಟನೆ ನಡೆಸಿದರು. ಚಂದ್ರಗಿರಿ ಮೂಲಕ ಹೊಸದುರ್ಗ ತೆರಳುವ ರಸ್ತೆ ಇದಾಘಿದ್ದು, ಪ್ರತಿಭಟನೆಯಿಂದ ವಾಹನ ಸಂಚಾರ ಸಥಗಿತಗೊಂಡಿತ್ತು. ಸಮುದ್ರಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ತಡೆಗೋಡೆ ನಿರ್ಮಿಸಬೇಕು, ಈ ಬಗ್ಗೆ ಮಾತುಕತೆಗೆ ಜಿಲ್ಲಾಧಿಕಾರಿ ಸಥಳಕ್ಕೆ ಭೇಟಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.