ಕಾಸರಗೋಡು: ಪ್ರವಾಹ ಪೀಡಿತ ಹಿಮಾಚಲ ಪ್ರದೇಶದಿಂದ ಮೊಗ್ರಾಲ್‍ಪುತ್ತೂರಿನ ಎಂಟು ಜನರ ತಂಡವು ಸುರಕ್ಷಿತವಾಗಿ ಊರಿಗೆ ವಾಪಸಾಗಿದೆ. ಸ್ನೇಹಿತರಾದ ನೌಫಲ್ ಪುತ್ತೂರು, ಸುಬೈರ್, ಮುತ್ತಲೀಕ್, ನಾಸರ್, ಹಸನ್, ರಫೀಕ್, ಜಸ್ಸು, ನವಾಸ್ ಪ್ರವಾಹ ಪೀಡಿತ ಪ್ರದೇಶದಿಂದ ವಾಪಸಾದವರು.
ಜುಲೈ 2ರಂದು ದೆಹಲಿ, ಆಗ್ರಾ, ಕುಲು-ಮನಾಲಿ ಪ್ರವಾಸಕ್ಕಾಗಿ ಇವರು ತೆರಳಿದ್ದರು. ದೆಹಲಿಯಿಂದ ಬಸ್ ಮೂಲಕ ಹಿಮಾಚಲ ಪ್ರದೇಶ ತೆರಳಿದ್ದು, ಪ್ರಮುಖ ಸ್ಥಳ ಸಂದರ್ಶಿಸುವ ಮಧ್ಯೆ ಏಕಾಏಕಿ ಪ್ರವಾಹ ಕಾಣಿಸಿಕೊಂಡಿದೆ. ತಾವು ಉಳಿದುಕೊಂಡಿದ್ದ ಹೋಟೆಲ್ ಹೊರ ಪ್ರಪಂಚದ ಸಂಪರ್ಕ ಕಡಿದುಕೊಂಡು ಮತ್ತಷ್ಟು ಆತಂಕ ಎದುರಾಗಿತ್ತು. ಮನೆಯವರಿಗೂ ನಮ್ಮನ್ನು ಸಂಪರ್ಕಿಸಲಾಗದೆ ಆತಂಕ ಮನೆ ಮಾಡಿತ್ತು. ಕೊನೆಗೂ ಸುಮಾರು 25ಕಿ.ಮೀ ವರೆಗೆ ಸಂಚರಿಸಿ ಅಪಾಯಸ್ಥಳದಿಂದ ಹೊರಬಂದು ವಾಹನ ಹಿಡಿದು ಊರಿಗೆ ತಲುಪಲು ಸಾಧ್ಯವಾಗಿದೆ. ಊರಿಗೆ ತಲುಪಿದ್ದರೂ, ಅಲ್ಲಿನ ಭೀಕರ ದೃಶ್ಯಾವಳಿ ನಮ್ಮಲ್ಲಿನ ಜಂಘಾಬಲ ಹುದುಗಿಹೋಗುವಂತೆ ಮಾಡುತ್ತಿದೆ ಎಂಬುದಾಗಿ ಪಾರಾಗಿ ಬಂದಿರುವವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಮೊಗ್ರಾಲ್ ಪುತ್ತೂರು ನಿವಾಸಿಗಳು ಹಿಮಾಚಲಪ್ರದೇಶದ ಪ್ರವಾಹ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮೊಗ್ರಾಲ್ ಪುತ್ತೂರು ಪಂಚಾಯತ್ ಅಧ್ಯಕ್ಷ ವಕೀಲೆ ಶೆಮೀರಾ ಫೈಸಲ್, ಸಮಾಜ ಸೇವಕ ಮಾಹಿನ್‍ಕುನ್ನಿಲ್ ಅವರು ಜಿಲ್ಲಾಧಿಕಾರಿ ಇನ್ಬಾಶೇಖರ್ ಅವರಿಗೆ ಮಾಹಿತಿ ನೀಡಿದ್ದರು. ಜಿಲ್ಲಾಡಳಿತ ಹಾಗೂ ಸರ್ಕಾರದ ಮಟ್ಟದಲ್ಲಿ ಇವರ ಸಂಪರ್ಕಕ್ಕೆ ಪ್ರಯತ್ನ ನಡೆಯುತ್ತಿರುವ ಮಧ್ಯೆ ಇವರು ಊರಿಗೆ ಆಗಮಿಸಿದ್ದಾರೆ.