ಇಂಫಾಲ: ಮೇ 3ರಂದು ಮೈತೇಯಿ-ಕುಕಿ ಸಮುದಾಯಗಳ ನಡುವೆ ಸಂಘರ್ಷ ಭುಗಿಲೆದ್ದ ನಂತರ ಖಾಲಿ ಮಾಡಲಾಗಿದ್ದ ಮ್ಯಾನ್ಮಾರ್ ಗಡಿಯ ಸಮೀಪದಲ್ಲಿರುವ ಮಣಿಪುರದ ಮೊರೆಹ್ ಬಜಾರ್‌ನಲ್ಲಿರುವ ಹಲವಾರು ಮನೆಗಳಿಗೆ ಬುಧವಾರ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ.
ಇಂಫಾಲ: ಮೇ 3ರಂದು ಮೈತೇಯಿ-ಕುಕಿ ಸಮುದಾಯಗಳ ನಡುವೆ ಸಂಘರ್ಷ ಭುಗಿಲೆದ್ದ ನಂತರ ಖಾಲಿ ಮಾಡಲಾಗಿದ್ದ ಮ್ಯಾನ್ಮಾರ್ ಗಡಿಯ ಸಮೀಪದಲ್ಲಿರುವ ಮಣಿಪುರದ ಮೊರೆಹ್ ಬಜಾರ್‌ನಲ್ಲಿರುವ ಹಲವಾರು ಮನೆಗಳಿಗೆ ಬುಧವಾರ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ.
ಕುಕಿ ಸಮುದಾಯದ ಪ್ರಾಬಲ್ಯವಿರುವ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಕೇಂದ್ರ ಭದ್ರತಾ ಪಡೆಗಳು ಬಳಸುತ್ತಿದ್ದ ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಕೆಲ ಗಂಟೆಗಳ ನಂತರ ಈ ಘಟನೆ ನಡೆದಿದೆ.
ನಾಗಾಲೆಂಡ್‌ನ ಡಿಂಪೌರ್‌ನಿಂದ ವಾಹನಗಳು ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 2ರ ಸಪೋರ್ಮಿನಾ ಪ್ರದೇಶದಲ್ಲಿ ವಾಹನಗಳನ್ನು ತಡೆದು ಬೆಂಕಿ ಹಚ್ಚಲಾಗಿದೆ. ಕುಕಿ ನಿವಾಸಿಗಳು ವಾಹನಗಳನ್ನು ಪರಿಶೀಲಿಸಲು ಬಯಸಿದ್ದರು. ಆದರೆ, ಭದ್ರತಾ ಸಿಬ್ಬಂದಿ ಪರಿಶೀಲನೆಗೆ ನಿರಾಕರಿಸಿದಾಗ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.
ಮೇ 3ರಂದು ಹಿಂಸಾಚಾರ ಪ್ರಾರಂಭವಾದಾಗ ಕುಕಿ ಮತ್ತು ಮೈತೇಯಿ ಸಮುದಾಯಗಳಿಗೆ ಸೇರಿದ ಸಾವಿರಾರು ಜನರು ಮೊರೆಹ್‌ನಿಂದ ಓಡಿಹೋದರು. ಅನೇಕ ಮನೆಗಳಿಗೆ ಆಗಲೆ ಬೆಂಕಿ ಹಚ್ಚಲಾಗಿತ್ತು. ಇದೀಗ, ಉಳಿದ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ.
ಮೊರೆಹ್, ಹಲವು ಸಮುದಾಯಗಳ ಜನ ವಾಸವಿದ್ದ ಸದಾ ಗಿಜಿಗುಡುವ ಮಾರುಕಟ್ಟೆ ಒಳಗೊಂಡಿದ್ದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ಕುಕಿಗಳು ಬಹುಸಂಖ್ಯಾತರು.
ಮೇ 3ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಘರ್ಷಣೆಯಿಂದಾಗಿ ಈವರೆಗೆ140ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 60,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.