ನವದೆಹಲಿ: ಗೋವು ತಳಿಗಳ ಸಂತತಿಯ ವಧೆಯನ್ನು ನಿಷೇಧಿಸುವಂತೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಈಚೆಗೆ ನಿರಾಕರಿಸಿದೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವುದು ಶಾಸಕಾಂಗಕ್ಕೆ ಮಾತ್ರ. ಈ ನಿಟ್ಟಿನಲ್ಲಿ ಕಾನೂನು ರಚಿಸುವಂತೆ ಶಾಸಕಾಂಗಕ್ಕೆ ನಿರ್ದೇಶಿಸಲು ಸುಪ್ರೀಂ ಕೋರ್ಟ್‌ಗೆ ಸಾಧ್ಯವಿಲ್ಲ ಎಂದು ಹೇಳಿದೆ.
ಆದರೆ, ವಿನಾಶದ ಅಂಚಿನಲ್ಲಿರುವ ಸ್ಥಳೀಯ ಜಾನುವಾರು ತಳಿಗಳನ್ನು ಕಾಪಾಡುವ ಮತ್ತು ಸಂರಕ್ಷಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಅರ್ಜಿದಾರರು ಅಹವಾಲು ಸಲ್ಲಿಸಬಹುದು ಎಂದು ಕೂಡಾ ಕೋರ್ಟ್ ತಿಳಿಸಿದೆ.
ಸ್ಥಳೀಯ ಜಾನುವಾರು ತಳಿಗಳ ಸಂರಕ್ಷಣೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಕರೀತಿಯ ನಿಲುವು ತೆಗೆದುಕೊಂಡಿವೆ. ಹಾಗಾಗಿ ಈ ನಿಟ್ಟಿನಲ್ಲಿ ಹೆಚ್ಚಿನ ನಿರ್ದೇಶನಗಳ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2018ರ ಆಗಸ್ಟ್‌ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಅರ್ಜಿ ಸಲ್ಲಿಸಿದ್ದರು.
ರಾಷ್ಟ್ರೀಯ ಜಾನುವಾರು ನೀತಿ, 2013ನ್ನು ಉಲ್ಲೇಖಿಸಿ ಎನ್‌ಜಿಟಿ ಆದೇಶ ನೀಡಿದೆ. ಕೆಲ ರಾಜ್ಯಗಳು ತಮ್ಮದೇ ಆದ ಜಾನುವಾರು ವಧೆ ವಿರೋಧಿ ನೀತಿಯನ್ನು ಹೊಂದಿವೆ. ಆದರೆ ಯಾವ ರಾಜ್ಯವೂ ಸ್ಥಳೀಯ ತಳಿಗಳನ್ನು ಸಂರಕ್ಷಿಸುವ ಕುರಿತು ವಿರೋಧ ವ್ಯಕ್ತಪಡಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಓಕ ಮತ್ತು ಸಂಜಯ್ ಕರೋಲ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.